ಜಿಲ್ಲೆ

ಬೆಳೆಗಳಿಗೆ ಬೆಲೆ ನಿಗದಿ ಮಾಡಿಸಿದ ಶಾಸಕರ ವೇತನ ಹೆಚ್ಚಳ

ಚಾಮರಾಜನಗರ: ರಾಜ್ಯ ಸರ್ಕಾರ ಶಾಸಕರ ಸಂಬಳ ಹೆಚ್ಚಳ ಮಾಡಿದೆ. ಆದರೆ ರೈತರ ಬೆಳೆಗಳಿಗೆ ಮಾತ್ರ ಬೆಲೆ ನಿಗದಿ ಮಾಡುತ್ತಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕುಂದು-ಕೊರತೆ ಸಭೆಯಲ್ಲಿ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರು ಸಂಬಳ ಹೆಚ್ಚಳ ಮಾಡಿಸಿಕೊಂಡಿದ್ದಾರೆ. ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಬೆಳೆಗಳಿಗೆ ಬೆಂಬಲ ಬೆಲೆಗಾಗಿ ಹಗಲು ರಾತ್ರಿ ಹೋರಾಟ ನಡೆಸಬೇಕು. ಆದರೆ ಜನಪ್ರತಿನಿಧಿಗಳು ಸಂಬಳ ತಕ್ಷಣ ಹೆಚ್ಚಳವಾಗಿದೆ ಎಂದರು.

ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ ವಿದ್ಯುತ್ ನೀಡಬೇಕು. ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡಿಸುವುದನ್ನು ಕೈಬಿಡಬೇಕು. ಅಕ್ರಮ-ಸಕ್ರಮ ಯೋಜನೆಯನ್ನು ತಕ್ಷಣ ಜಾರಿಗೆ ತರಬೇಕು. ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಸಂಪೂರ್ಣವಾಗಿ ಉಚಿತವಾಗಿ ನೀಡಬೇಕು. ಇದಕ್ಕೆ ಯಾವುದೇ ಷರತ್ತುಗಳನ್ನು ಹಾಕಬಾರದು. ಸೋಲಾರ್ ಪಂಪ್‌ಸೆಟ್ ಹಾಕಿಕೊಂಡಿರುವ ರೈತರಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡುವ ನಿಯಮವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಕಾಡು ಪ್ರಾಣಿಗಳ ಹಾವಳಿ ಇರುವುದರಿಂದ ತೋಟದ ಮನೆಗಳಿಗೂ ಸಹ ನಿರಂತರ ಜ್ಯೋತಿ ವಿಸ್ತರಿಸಬೇಕು. ಸಂಘದ ಸದಸ್ಯರ ಜತೆ ಸಚಿವರು ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ವಿದ್ಯುತ್ ಆಕಸ್ಮಿಕ ಅಪಘಾತದಿಂದ ಮರಣ ಹೊಂದಿದ ಕುಟುಂಬಗಳಿಗೆ ಕನಿಷ್ಠ 25 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಬೇಕು. ವಿದ್ಯುತ ಶಾರ್ಟ್‌ಸರ್ಕ್ಯೂಟಿನಿಂದ ಕಬ್ಬು ಭಸ್ಮವಾದರೆ ಪರಿಹಾರ ನೀಡುವುದು ವಿಳಂಬವಾಗುತ್ತಿದೆ ಎಂದರು.

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ಜಿಲ್ಲಾ ಉಪಾಧ್ಯಕ್ಷ ಮಲೆಯೂರು ಪ್ರವೀಣ್, ಚಾಮರಾಜನಗರ ತಾಲೂಕು ಅಧ್ಯಕ್ಷ ಅರಳಿಕಟ್ಟೆ ಕುಮಾರ್, ಉಡಿಗಾಲ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್, ನಂಜೇದೆವನಪುರ ರಾಜು, ಅಶೋಕ್, ಕಿಳಲೀಪುರ ಶ್ರೀಕಂಠ, ಮಲೆಯೂರು ಬಸವರಾಜಪ್ಪ, ರಘು, ವೀರನಪುರ ಸುನೀಲ್, ದೇವಲಾಪುರ ವೆಂಕಟರಾಮು, ಹೊನ್ನಹಳ್ಳಿ ಬಸವಣ್ಣ, ಉಡಿಗಾಲ ಮಹದೇವಸ್ವಾಮಿ, ಮಹೇಶ್, ಶಿವು, ಹರೀಶ್, ಕೀರ್ತಿ, ಮಂಜು ಇದ್ದರು.