ಜಿಲ್ಲೆ

ಬೆಳೆಗಳಿಗೆ ಫಸಲ್ ಬಿಮಾ ರಕ್ಷಾ ಕವಚ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ರೈತರ ಬೆಳೆಗಳಿಗೆ ಸುರಕ್ಷಾ ಕವಚವಾಗಿದ್ದು, ಪ್ರಸಕ್ತ ವರ್ಷದ ವಿವಿಧ ಬೆಳೆಗಳಿಗೆ ನೋಂದಣಿ ಆರಂಭವಾಗಿದೆ. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಬೇಕು ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
2022-23ನೇ ಸಾಲಿಗೆ ಸ್ಥಳೀಯ ವಿಪತ್ತು ಪರಿಹಾರ ನಿಯಡಿ ಜಿಲ್ಲೆಯ 1,38,169 ರೈತರಿಗೆ 23.63 ಕೋಟಿ ರೂ. ಪರಿಹಾರ ಮತ್ತು ಕ್ರಾಪ್ ಕಟಿಂಗ್ ಎಕ್ಸಪರಿಮೆಂಟ್ನಲ್ಲಿ 73,331 ರೈತರಿಗೆ 27.32 ಕೋಟಿ ರೂ. ಸೇರಿ 50.95 ಕೋಟಿ ರೂ. ರೈತರ ಖಾತೆಗೆ ಜಮೆ ಆಗಿದೆ. ಹೀಗಾಗಿ ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿಯಾದಲ್ಲಿ ಪ್ರತಿವರ್ಷ ಜಿಲ್ಲೆ ರೈತರು ಸೂಕ್ತ ಪರಿಹಾರ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸತತ ಏಳು ವರ್ಷಗಳಿಂದ ಬೀದರ್ ಜಿಲ್ಲೆ ನೋಂದಣಿ ಜತೆಗೆ ಪರಿಹಾರ ಪಡೆಯುವಲ್ಲಿ ದೇಶದಲ್ಲೇ ನಂ.1 ಸ್ಥಾನದಲ್ಲಿದೆ. ಆದರೆ ಕೆಲವೊಬ್ಬರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. 60 ವರ್ಷ ಅಧಿಕಾರ ನಡೆಸುವಾಗ ಇಂಥ ಯೋಜನೆ ಕೊಡಲಾಗದವರು ಈಗ ಅಪಪ್ರಚಾರ ಮಾಡುತ್ತಿದ್ದಾರೆ. ರೈತರು ಯಾವ ಕಾರಣಕ್ಕೂ ಸುಳ್ಳು ವದಂತಿ, ಅಪಪ್ರಚಾರಕ್ಕೆ ಕಿವಿಗೂಡದೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕೋರಿದ್ದಾರೆ.
2023-24ನೇ ಸಾಲಿಗೆ ಯೋಜನೆಯಡಿ ರೈತರ ನೋಂದಣಿ ಪ್ರಾರಂಭವಾಗಿದೆ. ಈ ವರ್ಷವೂ ರಾಷ್ಟ್ರೀಕೃತ ಬ್ಯಾಂಕ್, ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕಾಮನ್ ಸರ್ವಿಸ್ ಸೆಂಟರ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ರೈತರು ತಮ್ಮ ಬೆಳೆಗಳನ್ನು ನೋಂದಾಯಿಸಬಹುದು ಎಂದು ತಿಳಿಸಿದ್ದಾರೆ.
ಫಸಲ್ ಬಿಮಾ ಯೋಜನೆ ಅಡಿ ನೋಂದಣಿ ಮಾಡುವಾಗ ರೈತರು ತಮ್ಮ ಆಧಾರ್ ಕಾಡ್೯, ಹೊಲದ ಪಹಣಿ, ಆಧಾರ್ ಲಿಂಕ್ ಮಾಡಿರುವ ಬ್ಯಾಂಕ್ ಖಾತೆ ಮಾಹಿತಿ ನೀಡಬೇಕು. ಜು.31ರೊಳಗೆ ಉದ್ದು, ಹೆಸರು, ಸೋಯಾಬೀನ್, ಅವರೆ, ತೊಗರಿ, ಜೋಳ ಬೆಳೆಗಳ ಹಾಗೂ ಸೂರ್ಯಕಾಂತಿ ಬೆಳೆಯನ್ನು ಆ.16ರೊಳಗಾಗಿ ನೋಂದಣಿ ಮಾಡಬಹುದು ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಪ್ರಸಕ್ತ ವರ್ಷ ಸಹ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ರೈತರು ಬೆಳೆಗಳನ್ನು ನೋಂದಣಿ ಮಾಡಬೇಕು. ನೋಂದಣಿ ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಯೆ: 1800-200-5142ಗೆ ಕರೆ ಮಾಡಬೇಕು ಎಂದು ಹೇಳಿದ್ದಾರೆ.