ಜಿಲ್ಲೆ

ಬೆಳೆಗಳ ನೋಂದಣಿಗೆ ಕೊನೇ ದಿನಾಂಕ ಪ್ರಕಟ

ಧಾರವಾಡ: 2020-21ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಮಂಜೂರಾತಿ ನೀಡಿದೆ. ಈ ಯೋಜನೆಯಡಿ ಮುಖ್ಯ ಬೆಳೆಗಳಿಗೆ ಗ್ರಾಪಂ, ಸ್ಥಳೀಯ ಸಂಸ್ಥೆಗಳನ್ನು ಘಟಕಗಳನ್ನಾಗಿ ಹಾಗೂ ಇತರ ಬೆಳೆಗಳಿಗೆ ಹೋಬಳಿಯನ್ನು ವಿಮಾ ಘಟಕವನ್ನಾಗಿ ಪರಿಗಣಿಸಿ ಅಧಿಸೂಚಿಸಲಾಗಿದೆ. ಜಿಲ್ಲೆಯ ರೈತರು ಬೆಳೆಗಳ ನೋಂದಣಿ ಮಾಡಿಕೊಂಡು ವಿಮಾ ಸೌಲಭ್ಯ ಪಡೆಯಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಗ್ರಾಪಂ ಮಟ್ಟದ ಹಿಂಗಾರು ಹಂಗಾಮಿನ ಮಳೆ ಆಶ್ರಿತ ಕಡಲೆ ಮತ್ತು ಜೋಳಕ್ಕೆ ನ. 30, ಹೋಬಳಿ ಮಟ್ಟದ ಮಳೆ ಆಶ್ರಿತ ಹುರುಳಿ ಬೆಳೆಗಳಿಗೆ ನ. 17, ಹೋಬಳಿ ಮಟ್ಟದ ಮಳೆ ಆಶ್ರಿತ ಕಡಲೆ, ಹೆಸರು, ಮುಸುಕಿನ ಜೋಳ, ಗೋಧಿ, ಹಾಗೂ ನೀರಾವರಿ ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ ಬೆಳೆಗಳಿಗೆ ನ.30, ಹೋಬಳಿ ಮಟ್ಟದ ನೀರಾವರಿ ಗೋಧಿಗೆ ಡಿ.16, ಹೋಬಳಿ ಮಟ್ಟದ ನೀರಾವರಿ ಕಡಲೆಗೆ ಡಿ.31 ಹಾಗೂ ಹೋಬಳಿ ಮಟ್ಟದ ಬೇಸಿಗೆ ಹಂಗಾಮಿನ ನೀರಾವರಿ ಶೇಂಗಾ ಬೆಳೆಗೆ 2021ರ ಮಾ.1ರವರೆಗೆ ನೋಂದಣಿಗೆ ಅವಕಾಶವಿದೆ.

ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಸಾಲ ಪ್ರಮಾಣದ ಆಧಾರದ ಮೇಲೆ ನಿರ್ಧರಿಸಲಾಗಿದೆ. ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುವುದು. ನಂತರ ಬೆಳೆಸಾಲ ಪಡೆದ ರೈತರು ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಹೊಂದಿರದಿದ್ದರೆ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನ ಮುಂಚಿತ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಿದಲ್ಲಿ ಅಂತಹ ರೈತರನ್ನು ಯೋಜನೆಯಿಂದ ಕೈಬಿಡಲಾಗುವುದು.

ಹೆಚ್ಚಿನ ಮಾಹಿತಿಗೆ ಇನ್ಶೂರೆನ್ಸ್ ಕಂಪನಿ ಕಚೇರಿ ಅಥವಾ ಸಮೀಪದ ಉಪ ಕೃಷಿ ನಿರ್ದೇಶಕರ ಕಚೇರಿ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರ ಅಥವಾ ಬ್ಯಾಂಕ್ ಶಾಖೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರತಿನಿಧಿಗಳ ನಿಯೋಜನೆ

ತಾಲೂಕುವಾರು ಭಾರತಿ ಆಕ್ಸಾ ಜನರಲ್ ಇನ್ಶೂರೆನ್ಸ್ ಕಂಪನಿಯ ಪ್ರತಿನಿಧಿಗಳನ್ನು ನಿಯೋಜಿಸಿದ್ದು, ಧಾರವಾಡದಲ್ಲಿ ವಿಶ್ವನಾಥ ಹಿರೇಮಠ ಮೊ. 9901647472, ಹುಬ್ಬಳ್ಳಿ ಸಚಿನ್ ಕಮಕರ್ (8217053424), ಕಲಘಟಗಿಗೆ ನಿಂಗಪ್ಪ ತಾವರಗೇರಿ (9743111618), ಕುಂದಗೋಳಕ್ಕೆ ರೇವಚಿತ ಬಾಗೇವಾಡಿ (9880421969), ನವಲಗುಂದದಲ್ಲಿ ಮುತ್ತನಗೌಡ ಹಿರೇಗೌಡರ (6360335368) ಅವರನ್ನು ನಿಯೋಜಿಸಲಾಗಿದೆ.