ಜಿಲ್ಲೆ

ಬೆಳೆ ಹಾನಿ ಪರಿಹಾರ ಶೀಘ್ರ ಬಿಡುಗಡೆ ಮಾಡಲಿ:ಎಚ್.ಡಿ. ರೇವಣ್ಣ ಒತ್ತಾಯ

ಹಾಸನ: ಮಳೆಯಿಂದ ಹಾನಿ ಅನುಭವಿಸಿರುವ ಜಿಲ್ಲೆಯ ಸಾವಿರಾರು ರೈತರಿಗೆ ಪರಿಹಾರ ಕೊಡಲು ರಾಜ್ಯ ಸರ್ಕಾರ ಸತಾಯಿಸುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತೀವ್ರವಾಗಿ ಖಂಡಿಸಿದರು.
ತಾಪಂ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದ ರಸ್ತೆ, ಸೇತುವೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ, ಅಂಗನವಾಡಿ ಸೇರಿದಂತೆ ಅಪಾರ ಪ್ರಮಾಣದಲ್ಲಿ ಆಸ್ತಿ ನಷ್ಟವಾಗಿದ್ದರೂ ನಯಾಪೈಸೆ ಬಿಡುಗಡೆ ಮಾಡಿಲ್ಲ. ಬೆಳೆ ಹಾನಿ ಪರಿಹಾರಕ್ಕೆ ರೈತರು ಕಾಯುತ್ತಿದ್ದು, ಇನ್ನಾದರೂ ಹಾನಿಗೆ ಪರಿಹಾರ ಕೊಡಿ ಎಂದು ಆಗ್ರಹಿಸಿದರು.
ಐದು ಗ್ಯಾರಂಟಿಗಳಿಗೆ ಹಣ ನೀಡುತ್ತಿರುವುದರಿಂದ ರೈತರಿಗೆ ಪರಿಹಾರ ಕೊಡಲು ಆಗದೇ ಇದ್ದರೆ ಅದನ್ನು ಜನರ ಮುಂದೆ ಹೇಳಿ ಬಿಡಲಿ. ಮಳೆಯಿಂದ ಹಾನಿಯಾಗಿ ನಾಲ್ಕೈದು ತಿಂಗಳು ಕಳೆದರೂ ಪರಿಹಾರ ನೀಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ತೋಟಗಾರಿಕೆ ಇಲಾಖೆಯಲ್ಲಿ 444 ಹೆಕ್ಟೇರ್, ಕೃಷಿ ಇಲಾಖೆಯಲ್ಲಿ 861 ಹೆಕ್ಟೇರ್, 99 ಕೆರೆ, 646 ಕಿ.ಮೀ. ಲೋಕೋಪಯೋಗಿ ರಸ್ತೆ, 38 ಸೇತುವೆ, 650 ಶಾಲೆ, 369 ಅಂಗನವಾಡಿ, 1227 ವಿದ್ಯುತ್ ಕಂಬ ಹಾಳಾಗಿದ್ದರೂ, ಸರ್ಕಾರ ಕಂಡೂ ಕಾಣದಂತೆ ಇದೆ. ರೈತರ ಬಗ್ಗೆ ಅಸಡ್ಡೆ ತೋರುತ್ತಿದೆ ಎಂದು ಕಿಡಿ ಕಾರಿದರು.
ರೈತರ ದೃಷ್ಟಿಯಲ್ಲಿ ಅಂದಾಜಿಸುವುದಾದರೆ 3-4 ಸಾವಿರ ಕೋಟಿ ರೂ. ನಷ್ಟವಾಗಿದೆ. ಆದರೆ ಈ ಸರ್ಕಾರ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರವೇ ಪರಿಹಾರ ಕೊಡಲು ಹಿಂದೇಟು ಹಾಕುತ್ತಿದೆ. ವಿಪರ್ಯಾಸ ಎಂದರೆ ರಸ್ತೆ ಗುಂಡಿ ಮುಚ್ಚಲು ಈ ಸರ್ಕಾರ ಹಣ ನೀಡುತ್ತಿಲ್ಲ. ಗ್ರಾಮೀಣಾಭಿವೃದ್ಧಿಗೆ 1 ರೂಪಾಯಿ ಸಹ ನೀಡಿಲ್ಲ. ನಾವು ಅಭಿವೃದ್ಧಿ ಮಾಡುತ್ತಿದ್ದೇವೆ, ರೈತರ ಹಿತ ಕಾಯುತ್ತಿದ್ದೇವೆ ಎಂದೆಲ್ಲ ಹೇಳಿಕೊಳ್ಳುವ ಸರ್ಕಾರ, ಪರಿಹಾರ ಕೊಡದೇ ಇರುವುದಕ್ಕೆ ಏನು ರೋಗ. ಕೇವಲ ಕೇಂದ್ರದತ್ತ ಬೊಟ್ಟು ಮಾಡಿ ಕೂರುವುದು ಸರಿಯೇ? ಇನ್ನೂ ಕೆಲ ದಿನ ಕಾಯುತ್ತೇವೆ. ನಂತರ ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದರು.
ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ವರ್ಗಾವಣೆ ದಂಧೆ ಮಿತಿ ಮೀರಿದೆ. ಹಾಸ್ಟೆಲ್ ಅಡುಗೆಯವರು, ಅಟೆಂಡರ್‌ಗಳನ್ನು ವರ್ಗ ಮಾಡಲು 5-10 ಸಾವಿರ ರೂ.ಗೆ ಮಧ್ಯವರ್ತಿಗಳನ್ನು ಬಿಟ್ಟು ಕೈಚಾಚಲಾಗುತ್ತಿದೆ. ಇದಕ್ಕೆ ಸಾಕ್ಷ್ಯ ಬೇಕಿದ್ದರೆ ದಾಖಲೆ ಬಿಡುಗಡೆ ಮಾಡುವೆ. ಹಣ ಕೊಡದೇ ಹೋದರೆ ಹೆದರಿಸಲಾಗುತ್ತಿದೆ. ಇದಕ್ಕೆ ಅಧಿಕಾರಿಗಳು, ಸರ್ಕಾರ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.
ಪೊಲೀಸರನ್ನು ಬಿಟ್ಟು ಅಥವಾ ಬೇರಾವುದೆ ಒತ್ತಡದಿಂದ ಗೌಡರ ಕುಟುಂಬ ಮುಗಿಸುತ್ತೇವೆ ಎಂದು ಹೊರಟವರಿಗೆ ನಿರಾಶೆ ಆಗಲಿದೆ. ಕಾಲ ಒಂದೇ ಸಮ ಇರಲ. ಇವರು ಏನೇ ಸಂಚು ಮಾಡಿದರೂ ನಮ್ಮ ಕುಟುಂಬ ಹೆದರಲ್ಲ. ದೇವೇಗೌಡರು ಯಾರಿಗೂ ಕಣ್ಣೀರು ಹಾಕಿಸಲು ಹೋಗಿಲ್ಲ. ಅವರೇ ಅಗತ್ಯವಿದ್ದಾಗ ಗೌಡರ ಬಳಿ ಬಂದು ಕಣ್ಣೀರು ಹಾಕಿದ್ದಾರೆ. ಕೈ ಕಾಲು ಹಿಡಿದಿದ್ದಾರೆ. ನಮ್ಮ ಕುಟುಂಬದ ಕೆಲವರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಾನು ಕೋರ್ಟ್ ಮತ್ತು ದೇವರನ್ನು ನಂಬುತ್ತೇವೆ. ಆ ಬಗ್ಗೆ ಈಗ ಮಾತನಾಡಲ್ಲ. ಸಮಯ ಬಂದಾಗ ಎಲ್ಲಾ ಹೇಳುವೆ ಎಂದು ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಲಕ್ಷ್ಮಣಗೌಡ ಇದ್ದರು.