ಜಿಲ್ಲೆ

ಬೆಳೆ ಸಾಲಕ್ಕೆ ರೈತರ ಪರದಾಟ

ಶಿರಸಿ: ಸಾಲದ ಕಂತು ಮರುಪಾವತಿಯ ಅವಧಿಯನ್ನು ವಿಸ್ತರಿಸಿ ಆರ್​ಬಿಐ ಆದೇಶ ಹೊರಡಿಸಿದ್ದರೂ, ಶೂನ್ಯ ಬಡ್ಡಿ ದರದ ಬೆಳೆ ಸಾಲಕ್ಕೆ ಮಾತ್ರ ಈ ವಿನಾಯಿತಿ ಅನ್ವಯವಾಗದಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.

ಎಲ್ಲ ಬ್ಯಾಂಕ್​ಗಳಲ್ಲಿ ಗ್ರಾಹಕರು ಪಡೆದಿರುವ ಸಾಲ ಮರುಪಾವತಿಗೆ ಜೂನ್ 30ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಆರ್​ಬಿಐ ಆದೇಶ ಹೊರಡಿಸಿದಾಗ, ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕೃಷಿಕರು ನಿಟ್ಟುಸಿರು ಬಿಟ್ಟಿದ್ದರು. ಸಹಕಾರ ಸಂಘಗಳ ನಿಬಂಧಕರ ಕೇಂದ್ರ ಕಚೇರಿಯಿಂದ ಅಲ್ಪಾವಧಿ, ಮಧ್ಯಮಾವಧಿ ಸಾಲದ ಕಂತುಪಾವತಿಗೆ ಅವಧಿ ವಿಸ್ತರಣೆ ಮಾಡಿರುವ ವಿಚಾರ, ಡಿಸಿಸಿ ಬ್ಯಾಂಕ್​ಗಳ ಮೂಲಕ ಸಹಕಾರ ಸಂಘಗಳಿಗೆ ತಲುಪಿತ್ತು. ಇದರಂತೆ, ಪ್ರಾಥಮಿಕ ಸಹಕಾರ ಸಂಘಗಳು ಸದಸ್ಯ ರೈತರಿಗೆ ಈ ವಿಷಯವನ್ನು ತಲುಪಿಸಿದ್ದವು. ಆದರೆ ಈಗ, ಏಕಾಏಕಿ ಮೇ 31ರ ಒಳಗೆ ಬೆಳೆ ಸಾಲ ತುಂಬಿದರೆ ಮಾತ್ರ ಶೂನ್ಯ ಬಡ್ಡಿದರ ಅನ್ವಯವಾಗುತ್ತದೆಂಬ ಪರಿಷ್ಕೃತ ಆದೇಶ ಹೊರಬಿದ್ದಿದೆ.

ಪ್ರತಿವರ್ಷ 3 ಲಕ್ಷ ರೂ.ವರೆಗಿನ ಶೂನ್ಯ ಬಡ್ಡಿದರದ ಅಲ್ಪಾವಧಿ ಬೆಳೆ ಸಾಲ ತುಂಬಲು ಮೇ 31ರವರೆಗೆ ಗಡುವು ಇರುತ್ತಿತ್ತು. ಆದರೆ, ಈ ಬಾರಿ ಕೋವಿಡ್ 19 ಸಾಂಕ್ರಾಮಿಕ ಕಾಯಿಲೆಯ ಕಠಿಣ ಸಂದರ್ಭದಲ್ಲಿ, ಬೆಳೆ ಸಾಲ ಪಾವತಿಸುವ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಸಹಕಾರ ಸಂಘಗಳ ನಿಬಂಧಕರ ಕಚೇರಿ ನೀಡಿದ ಮಾಹಿತಿಯನ್ನು ನಾವು ರೈತರಿಗೆ ತಿಳಿಸಿದ್ದೇವು. ಈಗ ಏಕಾಏಕಿ ಮೇ 5ರಂದು ಕೆಡಿಸಿಸಿ ಬ್ಯಾಂಕ್​ನಿಂದ ಹೊಸ ಆದೇಶ ಬಂದಿದ್ದು, ಬೆಳೆ ಸಾಲವನ್ನು ಮೇ 31ರ ಒಳಗೆ ಪಾವತಿಸಿದರೆ ಮಾತ್ರ ಶೂನ್ಯ ಬಡ್ಡಿ ದರ ಅನ್ವಯವಾಗುತ್ತದೆ. ನಂತರ ಜೂನ್ 30ರೊಳಗೆ ಪಾವತಿಸಿದರೆ ಶೇ. 5ರಷ್ಟು ಬಡ್ಡಿ ಪಾವತಿಸಬೇಕು ಎಂದು ತಿಳಿಸಲಾಗಿದೆ. ಇದರಿಂದ ರೈತರಿಗಷ್ಟೇ ಅಲ್ಲ, ಸೊಸೈಟಿಗಳಿಗೂ ಕಷ್ಟವಾಗುತ್ತದೆ ಎಂದು ಸೊಸೈಟಿಯ ಪ್ರಮುಖರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಎಲ್ಲ ರೀತಿಯ ಸಾಲಗಳ ಪಾವತಿಗೆ ಅವಧಿ ವಿಸ್ತರಿಸಿದಾಗ, ರೈತರ ಸಾಲಕ್ಕೆ ಮಾತ್ರ ಯಾಕೆ ವಿನಾಯಿತಿ ಇಲ್ಲ? ಅಲ್ಪಾವಧಿ ಸಾಲಕ್ಕೆ ಕೇಂದ್ರ ಸರ್ಕಾರ ನೀಡುವ ಶೇ. 5ರ ಬಡ್ಡಿ ವಿನಾಯಿತಿಯನ್ನು ವಿಸ್ತರಿಸುವುದಿಲ್ಲವೆಂದು ತಿಳಿಸಿದೆ. ಹೀಗಾಗಿ, ಮೇ 31ರ ನಂತರ ಸಾಲ ತುಂಬಿದಲ್ಲಿ ಆ ಮೊತ್ತವನ್ನು ರೈತರು ಭರಿಸಬೇಕಾಗಿದೆ. ಬೆಳೆಗೆ ಬೆಲೆಯಿಲ್ಲದೆ ಕಷ್ಟದಲ್ಲಿರುವ ರೈತನಿಗೆ ನೆರವಾಗಬೇಕಾದ ಸರ್ಕಾರವೇ ಈ ನಿಲುವು ತಳೆದಿದ್ದು ಸರಿಯಲ್ಲ. | ನರಸಿಂಹ ಹೆಗಡೆ, ರೈತ

ಈಗಾಗಲೇ ಕೆಲವು ರೈತರು ಸ್ವಯಂ ಪ್ರೇರಣೆಯಿಂದ ಬೆಳೆ ಸಾಲ ತುಂಬಿದ್ದಾರೆ. ಸಾಲ ತುಂಬಿದವರಿಗೆ ಒಂದೆರಡು ದಿನಗಳಲ್ಲಿ ಹೊಸ ಸಾಲ ನೀಡಲಾಗುತ್ತಿದೆ. | ಎಸ್.ಬಿ.ಚೌವ್ಹಾಣ-ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ