ಮುಂಡಗೋಡ: ರೈತರಿಗೆ ಮಂಜೂರಾದ ಬೆಳೆ ಸಾಲವನ್ನು ಪಟ್ಟಣದ ಕೆಡಿಸಿಸಿ ಬ್ಯಾಂಕ್ನ ಶಾಖೆಯಲ್ಲಿ ವಿತರಣೆ ಮಾಡುತ್ತಿರುವುದರಿಂದ ರೈತರು ಬೆಳಗ್ಗೆಯಿಂದಲೇ ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.
ರೈತರು ತಮ್ಮ ಕೆಲಸ ಬಿಟ್ಟು ಬೆಳಗ್ಗೆ 5ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಲ್ಲಬೇಕು. ತಡವಾಗಿ ಬಂದರೆ ಖಾಲಿ ಕೈಯಲ್ಲಿ ಹಿಂದಿರುಗಬೇಕಾಗುತ್ತದೆ. ತಾಲೂಕಿನ ಎಲ್ಲ ಸೊಸೈಟಿಗಳ ಬೆಳೆ ಸಾಲವನ್ನು ಇದೇ ಶಾಖೆಯಲ್ಲಿ ವಿತರಣೆ ಮಾಡುತ್ತಿರುವುದರಿಂದ ರೈತರಿಗೆ ತೀರಾ ತೊಂದರೆಯಾಗಿದೆ. ಬಾಕಿ ತಾಲೂಕುಗಳಿಗೆ ಹೋಲಿಸಿದರೆ ಮುಂಡಗೋಡ ತಾಲೂಕಿನಲ್ಲಿ ರೈತರ ಸಂಖ್ಯೆ ಹೆಚ್ಚಿದ್ದು, ಬೆಳೆ ಸಾಲ ವಿತರಣೆ ಮತ್ತು ಇನ್ನಿತರ ಬ್ಯಾಂಕ್ ಸೇವೆಗಳಿಗಾಗಿ ಇನ್ನೆರಡು ಶಾಖೆಗಳ ಅವಶ್ಯಕತೆ ಇದೆ ಎಂಬುದು ರೈತರ ಅನಿಸಿಕೆಯಾಗಿದೆ.
ಈ ಮೊದಲು ರೈತರ ಬೆಳೆ ಸಾಲ ಆಯಾ ಸೊಸೈಟಿಗಳಲ್ಲಿಯೇ ಪಡೆಯುತ್ತಿದ್ದರು. ಆದರೆ, ಕಳೆದ ಎರಡು ವರ್ಷದಿಂದ ತಾಲೂಕಿನ ರೈತರ ಬೆಳೆ ಸಾಲವನ್ನು ಕೆಡಿಸಿಸಿ ಬ್ಯಾಂಕ್ನಲ್ಲಿ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ರೈತರು ಬ್ಯಾಂಕ್ನಿಂದ ಬೆಳೆ ಸಾಲದ ಹಣ ಪಡೆಯಬೇಕಾಗಿದೆ. | ಕೆ. ಪುಷ್ಪಾಂಗದನ್ ಎಲ್ಎಸ್ಎಂಪಿ ಸೊಸೈಟಿ ಮ್ಯಾನೇಜರ್
ಬೆಳೆ ಸಾಲ ಪಡೆಯಲು ತಾಲೂಕಿನ ರೈತರಿಗೆ ಮುಂಡಗೋಡ ಕೆಡಿಸಿಸಿ ಬ್ಯಾಂಕ್ ಒಂದೇ ಆಗಿದೆ. ಬೆಳಗ್ಗೆಯಿಂದ ಸಂಜೆವರೆಗೂ ಕಾದು ಬೆಳೆ ಸಾಲ ತೆಗೆದುಕೊಂಡು ಹೋಗಬೇಕಾಗಿದೆ. ತಾಲೂಕಿನಲ್ಲಿ ಇನ್ನೆರಡು ಶಾಖೆಗಳಲ್ಲಿ ಬೆಳೆ ಸಾಲ ವಿತರಣೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. | ಖಂಡಪ್ಪ ಪವಾರ ನಂದಿಗಟ್ಟಿ ಗ್ರಾಮದ ರೈತ