ಜಿಲ್ಲೆ

ಬೆಳೆ ಸಮೀಕ್ಷೆ ಆ್ಯಪ್‌ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾಲನೆ ; ಬೆಳೆಗಳ ಮಾಹಿತಿಯನ್ನು ರೈತರೇ ಸ್ವಯಂ ಅಪ್‌ಲೋಡ್ ಮಾಡಲು ಸಲಹೆ

ತುಮಕೂರು: ಬೆಳೆ ಮಾಹಿತಿಯನ್ನು ಛಾಯಾಚಿತ್ರ ಸಹಿತ ಸ್ವಯಂ ದಾಖಲಿಸುವ ಬೆಳೆ ಸಮೀಕ್ಷೆ ಆ್ಯಪ್‌ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾಲನೆ ನೀಡಿದರು.

ಶುಕ್ರವಾರ ಕೋರಾ ಗ್ರಾಮದ ಲಕ್ಷ್ಮೀನರಸಮ್ಮ ಎಂಬುವವರ ಜಮೀನಿನಲ್ಲಿ ಬೆಳೆಗಳ ಫೋಟೋ ಅಪ್‌ಲೋಡ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಸಚಿವರು, 3 ವರ್ಷಗಳಿಂದ ಬೆಳೆ ಸಮೀಕ್ಷೆ ಮಾಡಲಾಗುತ್ತಿದ್ದು, ಈ ಮೊದಲು ಆಯಾ ಗ್ರಾಮದ ಪಿಆರ್‌ಒಗಳು ರೈತರ ಜಮೀನುಗಳಿಗೆ ಬಂದು ಬೆಳೆಯ ಫೋಟೋ ತೆಗೆಯುತ್ತಿದ್ದರು. ಆದರೆ ಪ್ರಸಕ್ತ ವರ್ಷದಿಂದ ರೈತರು ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರ ತೆಗೆದು ರೈತರೇ ಸ್ವಯಂ ಅಪ್‌ಲೋಡ್ ಮಾಡಬಹುದು ಎಂದರು.

ಬೆಳೆ ಸಮೀಕ್ಷೆಗಾಗಿ ರೈತರು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವಂತಿಲ್ಲ, ರೈತ ತನ್ನ ಜಮೀನಿನಲ್ಲಿ ತಾನು ಬೆಳೆದ ಬೆಳೆಯನ್ನು ತಾನೇ ಸಮೀಕ್ಷೆ ಮಾಡಬಹುದು. ಬೆಳೆ ಸಮೀಕ್ಷೆಯಡಿ ಸಂಗ್ರಹವಾಗುವ ಮಾಹಿತಿಯನ್ನು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಸಹಾಯಧನ ನೀಡಲು ಉಪಯೋಗವಾಗುತ್ತದೆ ಎಂದರು.

ರೈತರು ಕೂಡಲೇ ಕಾರ್ಯಪ್ರವೃತ್ತರಾಗಿ ಬೆಳೆ ವಿವರಗಳನ್ನು ಮೊಬೈಲ್ ಮೂಲಕ ಸ್ವಯಂ ದಾಖಲಿಸಬೇಕು. ಬೆಳೆಗಳ ವಿವರಗಳನ್ನು ದಾಖಲಿಸಲು ಆ.24 ಕಡೆಯ ದಿನವಾಗಿದೆ. ರೈತರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು. ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನಾ, ಉಪನಿರ್ದೇಶಕ ಉಮೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು, ತಹಸೀಲ್ದಾರ್ ಮೋಹನ್‌ಕುಮಾರ್ ಮತ್ತಿತರರು ಇದ್ದರು.

ಸ್ಥಳದಲ್ಲಿಯೇ ಸಮೀಕ್ಷೆ: ತುಮಕೂರು ತಾಲೂಕು ಕೋರಾದ ಲಕ್ಷ್ಮೀನರಸಮ್ಮ ಅವರ ಸ.ನಂ. 24/5ರಲ್ಲಿ 30 ಗುಂಟೆ ಪ್ರದೇಶದಲ್ಲಿ ಮಳೆಯಾಶ್ರಿತವಾಗಿ ಬೆಳೆದಿದ್ದ ರಾಗಿ ಹಾಗೂ ಕರಿರಂಗಯ್ಯ ಅವರು ಸ.ನಂ.24/6ರಲ್ಲಿ 1 ಎಕರೆ ಪ್ರದೇಶದಲ್ಲಿ ಬೆಳದಿರುವ ಅಡಕೆ ಬೆಳೆಗಳನ್ನು ಆ್ಯಪ್ ಮೂಲಕ ಸ್ಥಳದಲ್ಲಿಯೇ ಸಮೀಕ್ಷೆಯಲ್ಲಿ ದಾಖಲಿಸಲಾಯಿತು. ಜಿಲ್ಲೆಯ ರೈತರು ತಾವೇ ಸಮೀಕ್ಷೆಗೆ ಜಮೀನುಗಳಲ್ಲಿ ಬೆಳೆದಿರುವ ಬೆಳೆ ದಾಖಲಿಸಬಹುದಾಗಿದೆ.

ಬೆಳೆ ಸಮೀಕ್ಷೆ ಉತ್ಸವ: ಪ್ರತಿ ರೈತರಿಗೂ ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ಮಾಹಿತಿ ನೀಡಲು ಕೃಷಿ ಇಲಾಖೆ ವತಿಯಿಂದ 10 ದಿನ ಬೆಳೆ ಸಮೀಕ್ಷೆ ಉತ್ಸವ ನಡೆಸಲಾಗುತ್ತಿದ್ದು, ವಾಹನಗಳ ಮೂಲಕ ಪ್ರಚಾರ ನಡೆಸಲಿದೆ. ಆ್ಯಪ್ ಬಳಕೆ ಹಾಗೂ ಇದರ ಮಹತ್ವ ಸಾರುವ ಪೋಸ್ಟರ್ ಒಳಗೊಂಡಿರುವ ವಾಹನ ಜಿಲ್ಲೆಯ ಎಲ್ಲ ಹಳ್ಳಿಗಳಿಗೂ ಆಗಮಿಸಲಿದ್ದು, ಬೆಳೆ ಸಮೀಕ್ಷೆ ಮಾಹಿತಿ ಸಂಚಾರ ವಾಹನಕ್ಕೆ ಸಚಿವ ಬಿ.ಸಿ.ಪಾಟೀಲ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.