ಬ್ಯಾಡಗಿ: 2019-20ನೇ ಸಾಲಿನ ಮುಂಗಾರು ಹಂಗಾಮು ಬೆಳೆ ಸಮೀಕ್ಷೆ ಆಪ್ನಲ್ಲಿ ಗ್ರಾಮಲೆಕ್ಕಾಧಿಕಾರಿಗಳು ತಪ್ಪು ಮಾಹಿತಿ ಅಪ್ಲೋಡ್ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರೆ. ಅಂತಹ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ಜರುಗಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ತಾಲೂಕು ರೈತ ಹೋರಾಟ ಸಮಿತಿ ಕಾರ್ಯಕರ್ತರು ತಹಸೀಲ್ದಾರ್ ಶರಣಮ್ಮ ಕಾರಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ತಾಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ಹನುಮಂತಪ್ಪ ಮಾಗೋಡ, ಕಂದಾಯ ಇಲಾಖೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಬೆಳೆ ಸಮೀಕ್ಷೆಯಲ್ಲಿ ತಪ್ಪಾಗಿದೆ. ರೈತರ ಹೊಲದಲ್ಲಿ ಗೋವಿನಜೋಳ ಬೆಳೆದಿದ್ದಲ್ಲಿ ಹತ್ತಿ ಎಂಬುದಾಗಿ, ಶೇಂಗಾ ಬೆಳೆದಲ್ಲಿ ಗೋವಿನ ಜೋಳವೆಂದು, ರಾಗಿ ಬದಲು ಜೋಳವೆಂದು ಆಪ್ನಲ್ಲಿ ನಮೂದಾಗಿದೆ. ಅಧಿಕಾರಿಗಳು ಯಾರದೋ ಹೊಲದಲ್ಲಿ ನಿಂತು ಸಮೀಕ್ಷೆ ಮಾಡಿದ್ದಾರೆ. ಇದಕ್ಕೆ ರೈತರು ಹೊಣೆಯಲ್ಲ. ತಮ್ಮ ತಪ್ಪು ಮುಚ್ಚಿಕೊಳ್ಳಲು ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನದ ಒಂದೇ ದಿನ ಮುಂಚಿತವಾಗಿ ತಿಳಿಸಿ, ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಅಧಿಕಾರಿಗಳು ರೈತರಿಗೆ ನ್ಯಾಯ ಒದಗಿಸಬೇಕು. ಕೆಲವರ ಪಹಣಿಯಲ್ಲಿ ಬೆಳೆ ಇಲ್ಲ ಎಂದು ನಮೂದಾಗಿವೆ. ಈ ಎಲ್ಲ ದೋಷ ಸರಿಪಡಿಸದಿದ್ದಲ್ಲಿ ಹೋರಾಟ ಸಮಿತಿ ಕಾರ್ಯಕರ್ತರು ತಹಸೀಲ್ದಾರ್ ಕಾರ್ಯಾಲಯದ ಎದುರು ಧರಣಿ ನಡೆಸಲಿದ್ದಾರೆ ಎಂದು ಎಚ್ಚರಿಸಿದರು. ಸಮಿತಿ ಗೌರವಾಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಮಾತನಾಡಿ, ರೈತರು ಸ್ಪ್ರಿಂಕ್ಲರ್ ಘಟಕ ಪಡೆಯಲು ಹೆಕ್ಟೇರ್ ಜಮೀನು ಉತಾರದ ದಾಖಲೆ ನೀಡಬೇಕು. ಈಗ ರೈತ ಕುಟುಂಬ ತುಂಡು ಭೂಮಿ ಮಾಡಿಕೊಂಡ ಪರಿಣಾಮ ರೈತರ ಹೆಸರಲ್ಲಿ 1 ಎಕರೆ, 1.5 ಎಕರೆ, 2 ಎಕರೆ ಮಾತ್ರ ಜಮೀನು ಉಳಿದಿವೆ. 2.5 ಎಕರೆ ಜಮೀನು ಇರಬೇಕೆಂಬ ಸರ್ಕಾರದ ನಿಯಮ ಸಡಿಲಿಸಿ ಎಲ್ಲ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಮಾಜಿ ಪುರಸಭೆ ಸದಸ್ಯ ಮಲ್ಲನಗೌಡ ಭದ್ರಗೌಡ್ರ, ರೈತ ಮುಖಂಡರಾದ ಈರಪ್ಪ ಸಂಕಣ್ಣನವರ, ರುದ್ರಪ್ಪ ಹೊಸಮನಿ, ಗೋಣೆಪ್ಪ ಸಂಕಣ್ಣನವರ, ರಾಮಣ್ಣ ಹಡಗಲಿ, ಶಶಿಧರಸ್ವಾಮಿ ಗೊಲ್ಲರಹಳ್ಳಿಮಠ ಇದ್ದರು.