ಜಿಲ್ಲೆ

ಬೆಳೆ ಸಮೀಕ್ಷೆ ಆಪ್ ಸಮಸ್ಯೆ

ಸುಭಾಸ ಧೂಪದಹೊಂಡ ಕಾರವಾರ: ಸರ್ಕಾರ ಹೊಸದಾಗಿ ಬಿಡುಗಡೆ ಮಾಡಿದ ಬೆಳೆ ಸಮೀಕ್ಷೆ ಆಪ್​ನಲ್ಲಿ ಭೂಮಿಯ ಪ್ರಕಾರ ಆಯ್ಕೆಗೆ ಅವಕಾಶವೇ ಇಲ್ಲದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಪಹಣಿ ಪತ್ರಿಕೆಯಲ್ಲಿ ಕಾಲಂ ನಂಬರ್ 12/8 ರಲ್ಲಿ ಭೂಮಿಯ ವಿಧವನ್ನು ಗುರುತಿಸಲಾಗುತ್ತದೆ. ಅದರಲ್ಲಿ ಭಾಗಾಯ್ತ (ತೋಟ), ಖುಷ್ಕಿ (ನೀರಾವರಿ ಇರುವ ಗದ್ದೆ), ತರಿ (ಒಣ ಭೂಮಿ), ಬೆಟ್ಟ (ತೋಟಕ್ಕೆ ಬಿಟ್ಟ ಜಮೀನು), ಅರಣ್ಯ ಹೀಗೆ ಗುರುತಿಸುವ ಪದ್ಧತಿ ಇದೆ.

ಕಳೆದ ಮೂರು ವರ್ಷದ ಹಿಂದೆ ಬೆಳೆ ಸಮೀಕ್ಷೆಯ ವ್ಯವಸ್ಥೆ ಜಾರಿಯಾದಾಗಿನಿಂದ ರೈತರಿಂದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನೂ ಪಡೆಯದೇ ಸರ್ಕಾರ ಎಲ್ಲ ಜಮೀನನ್ನು ಖುಷ್ಕಿ ಎಂದೇ ಆರ್​ಟಿಸಿಯಲ್ಲಿ ಗುರುತಿಸಿಬಿಟ್ಟಿದೆ.

ಈ ವರ್ಷ ಬೆಳೆ ಸಮೀಕ್ಷೆಯನ್ನು ರೈತರೇ ಮಾಡಿಕೊಳ್ಳಲು ಸರ್ಕಾರ ಆಪ್ ಬಿಡುಗಡೆ ಮಾಡಿದೆ. ಅದರಲ್ಲೂ ಜಮೀನಿನ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವೇ ಇಟ್ಟಿಲ್ಲ. ಇನ್ನು ಒಂದೇ ಜಮೀನಿನಲ್ಲಿ ಬಹು ಬೆಳೆ ಬೆಳೆಯುವವರಿಗೂ ಆಯ್ಕೆಯ ಅವಕಾಶ ನೀಡಿಲ್ಲ.

ಇದು ಮೊದಲಲ್ಲ: 2017 ರಿಂದ ಬೆಳೆ ಸಮೀಕ್ಷೆ ವಿಧಾನ ಜಾರಿಗೆ ತಂದಾಗಿನಿಂದಲೂ ಸರ್ಕಾರ ಈ ಸಮಸ್ಯೆ ಮಾಡಿದೆ. ಈ ಬಗ್ಗೆ ಕಳೆದ ವರ್ಷ ಶಿರಸಿ, ಸಿದ್ದಾಪುರ ಭಾಗದ ಸಾಕಷ್ಟು ರೈತರು ಆಕ್ಷೇಪ ವ್ಯಕ್ತಪಡಿಸಿದ ನಂತರ ಕೆಲಕಾಲ ಆರ್​ಟಿಸಿಯಲ್ಲಿ ಬದಲಾವಣೆ ಮಾಡಲಾಗಿತ್ತು. ಆದರೆ, ನಾಲ್ಕೈದು ತಿಂಗಳಲ್ಲಿ ಈಗ ಜಮೀನಿನ ವಿಧಾನಗಳನ್ನು ಮತ್ತೆ ಖುಷ್ಕಿ ಎಂದೇ ಬದಲಾಯಿಸಲಾಗಿದೆ.

ಸಮಸ್ಯೆ ಏನು?: ಜಮೀನಿನ ಪ್ರಕಾರವನ್ನು ಖುಷ್ಕಿ ಎಂದು ಆರ್​ಟಿಸಿಯಲ್ಲಿ ನಮೂದಿಸುವುದರಿಂದ ಬೆಲೆ ಸಾಲ ಪಡೆಯಲು ಸಮಸ್ಯೆ ಉಂಟಾಗುತ್ತಿದೆ. ಹಲವು ಸೊಸೈಟಿಗಳಲ್ಲಿ ಸಾಲ ನೀಡಲು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನಾಲ್ಕು ವರ್ಷದ ಹಿಂದಿನ ಪಹಣಿ ಪತ್ರಿಕೆ ಹಾಜರುಪಡಿಸುವಂತೆ ಸೂಚಿಸಲಾಗುತ್ತಿದೆ. ಇನ್ನು ಈಗ ನೆರೆ, ಕರೊನಾ ಪರಿಹಾರ ಎಲ್ಲದಕ್ಕೂ ಬೆಳೆ ಸಮೀಕ್ಷೆಯನ್ನೇ ಆಧಾರವಾಗಿ ಇಟ್ಟುಕೊಳ್ಳಲಾಗಿದೆ. ಇದರಿಂದ ಭೂಮಿಯ ಪ್ರಕಾರವೇ ಬದಲಾದರೆ ಪರಿಹಾರ ಸಿಗುವುದೂ ಕಷ್ಟವಾಗಬಹುದು ಎಂಬುದು ರೈತರ ಆತಂಕ.

ಸರ್ಕಾರ ವ್ಯವಸ್ಥಿತವಾಗಿ ಉತ್ತರ ಕನ್ನಡ ಜಿಲ್ಲೆಯ ಭಾಗಾಯ್ತ ಎಂಬ ಭೂಮಿಯ ಪ್ರಕಾರವನ್ನು ತೆಗೆದು ಹಾಕಿ, ಅದಕ್ಕೆ ಹೊಂದಿಕೊಂಡಿರುವ ಬೆಟ್ಟ ಜಮೀನಿನ ಹಕ್ಕು ಕಸಿದುಕೊಳ್ಳಲು ಮುಂದಾಗಿದೆಯೇ ಎಂಬ ಅನುಮಾನ ಮುಂದಾಗುತ್ತಿದೆ. ಈ ವ್ಯವಸ್ಥೆ ಬದಲಿಸುವಂತೆ ಹಲವು ಬಾರಿ ತಹಸೀಲ್ದಾರರ ಮೂಲಕ ಆಕ್ಷೇಪಣೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. | ಶ್ರೀಪತಿ ಹೆಗಡೆ ಕೋಡನಮನೆ

ಬೆಳೆ ಸಮೀಕ್ಷೆ ಆಪ್ ಅನ್ನು ಭೂಮಿ ತಂತ್ರಾಂಶದ ಜತೆ ಜೋಡಿಸಬೇಕಿದೆ. ಈ ಸಮಸ್ಯೆ ಗಮನಕ್ಕೆ ಬಂದಿದ್ದು, ಅದನ್ನು ಸರಿಪಡಿಸುವ ಬಗ್ಗೆ ಕೃಷಿ ಸಚಿವರ ಜತೆ ಚರ್ಚೆ ಮಾಡಿದ್ದೇನೆ. | ಶಿವರಾಮ ಹೆಬ್ಬಾರ ಉಸ್ತುವಾರಿ ಸಚಿವ