ಗದಗ: ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯ ರೈತರಿಗೆ ಸೇರಬೇಕಾದ ಲಕ್ಷಾಂತರ ರೂ. ಮಧ್ಯವರ್ತಿಗಳ ಪಾಲಾಗುತ್ತಿದೆ. ಈ ಕುರಿತು ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆಗೆ ಮಾಹಿತಿ ಇದ್ದರೂ ಇಲ್ಲಿಯವರೆಗೆ ಒಂದೂ ಕೇಸ್ ದಾಖಲಿಸದಿರುವ ಅಧಿಕಾರಿಗಳ ನಡೆ ಸಂಶಯಕ್ಕೆ ಎಡೆಮಾಡಿದೆ. ಜಿಲ್ಲೆಯ ಉನ್ನತ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಗದಗ ತಾಲೂಕಿನ ಹಾತಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಭಾಪುರ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಫಸಲ್ ಬಿಮಾ ಯೋಜನೆಯಡಿ ಗ್ರಾಮಕ್ಕೆ ಬಂದಿರುವ ಪರಿಹಾರ ಮೊತ್ತದ ಕುರಿತು ತನಿಖೆ ನಡೆಸಬೇಕಿದೆ. ಈ ಗ್ರಾಮಕ್ಕೆ ಬಂದಿರುವ ಕೋಟ್ಯಂತರ ರೂ.ಗಳಲ್ಲಿ ಅರ್ಧದಷ್ಟು ಜನರು ಹೊಲದಲ್ಲಿ ಬೆಳೆ ಇಲ್ಲದೆ ಹಣವನ್ನು ಪಡೆದುಕೊಂಡಿದ್ದಾರೆ. ಇನ್ನರ್ಧದಷ್ಟು ಹಣ ಮದ್ಯವರ್ತಿಗಳ ಪಾಲಾಗಿದೆ ಎಂದು ಅನ್ಯಾಯಕ್ಕೆ ಒಳಗಾದ ರೈತರು ಆರೋಪಿಸುತ್ತಿದ್ದಾರೆ.
ಹೇಗೆ ನಡೆಯುತ್ತಿದೆ ದಂಧೆ?:
ರೈತರು ಹೆಸರು ಬಿತ್ತನೆ ಮಾಡಿದ್ದರೆ ಕಡಲೆಗೆ ಪರಿಹಾರ ಸಿಗುತ್ತಿದೆ. ಹೊಲದಲ್ಲಿ ಏನನ್ನೂ ಬಿತ್ತದಿದ್ದರೂ ಕಡಲೆ ಬಿತ್ತನೆ ಮಾಡಿದ್ದೇವೆ ಎಂದು ಜಿಪಿಎಸ್ ಮಾಡಿಸಲಾಗುತ್ತಿದೆ. ಪಕ್ಕದ ಹೊಲದಲ್ಲಿ ಜಿಪಿಎಸ್ ಮಾಡಿಸಿ ತಮ್ಮ ಹೊಲದ ಸರ್ವೆ ನಂಬರ್ ಅಪ್ಲೋಡ್ ಮಾಡುವುದು ಒಂದಾದರೆ, ತಮ್ಮ ಹೊಲದಲ್ಲಿ ಹೆಸರು ಬಿತ್ತನೆ ಮಾಡಿದ್ದರೆ ಬೇರೆಯವರ ಹೊಲದಲ್ಲಿನ ಕಡಲೆ ಬೆಳೆಯನ್ನು ಕಿತ್ತುಕೊಂಡು ಬಂದು ಜಿಪಿಎಸ್ ಮಾಡಿಸಿ ಪರಿಹಾರವನ್ನು ಪಡೆದುಕೊಂಡವರೂ ಇದ್ದಾರೆ. ಇಂತಹ ಅನೇಕ ಪ್ರಕರಣಗಳು ಗದಗ ತಾಲೂಕಿನ ಸಂಭಾಪುರ ಗ್ರಾಮದಲ್ಲಿ ನಡೆದಿವೆ ಎನ್ನುತ್ತಾರೆ ರೈತರು.
2020ರ ಮುಂಗಾರಿನಲ್ಲಿ ಹೆಸರು ಹಾಕಿದ್ದೆ. ಉಳ್ಳಾಗಡ್ಡಿಗೆ ಪರಿಹಾರ ಬಂದಿತು. ಹಿಂಗಾರಿನಲ್ಲಿ ಜೋಳ ಹಾಕಿದ್ದೆ. ಗೋಧಿ ಬೆಳೆಗೆ ಪರಿಹಾರ ಬಂದಿತು. 2021ರ ಮುಂಗಾರಿನಲ್ಲಿ ಹೆಸರು ಹಾಕಿದ್ದೇನೆ. ಆದರೆ, ಉಳ್ಳಾಗಡ್ಡಿ ಮತ್ತು ಮೆಣಸಿನಕಾಯಿಗೆ ಪರಿಹಾರ ಬರಲಿದೆ. 2021ರ ಹಿಂಗಾರಿನಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದೇನೆ. ಕಡಲೆ ಬೆಳೆಗೆ ಪರಿಹಾರ ಬರಲಿದೆ. ಹೊಲದಲ್ಲಿ ಯಾವುದೇ ಬೆಳೆ ಬೆಳೆದಿರಲಿ, ಜಿಪಿಎಸ್ ಮಾಡಿಸುವ ಬೆಳೆಗೆ ಪರಿಹಾರ ಸಿಗಲಿದೆ. ಇಂಥದ್ದೇ ಬೆಳೆಗೆ ಜಿಪಿಎಸ್ ಮಾಡಿಸಿದರೆ ಪರಿಹಾರ ಸಿಗಲಿದೆ ಎಂದು ಹೇಗೆ ಗೊತ್ತಾಗುತ್ತದೆ. ಸಂಭಾಪುರ ಭಾಗದ ಹಲವಾರು ರೈತರು ಬೆಳೆಯುವುದೊಂದು, ಜಿಪಿಎಸ್ ಮಾಡಿಸುವುದೊಂದು. ಅವರು ದುಡಿಯದೇ ಲಕ್ಷಾಂತರ ರೂ. ಪಡೆಯುತ್ತಿದ್ದಾರೆ. ನಮ್ಮಂತಹ ಚಿಕ್ಕ ರೈತರಿಗೆ ಅನ್ಯಾಯವಾಗುತ್ತಿದೆ. ಮೂರು ಸಲ ವಿಮೆ ಪಾವತಿಸಿದರೂ ಪರಿಹಾರ ಬಂದಿಲ್ಲ. ಆದರೆ, ಬೇರೆಯವರು ಹೊಲದಲ್ಲಿ ಏನೂ ಬೆಳೆಯದಿದ್ದರೂ ಅವರಿಗೆ ಹೇಗೆ ಪರಿಹಾರ ಸಿಗುತ್ತದೆ ಎಂದು ಸಂಭಾಪುರದ ರೈತ ರಾಮನಗೌಡ ತಮ್ಮನಗೌಡ ಪ್ರಶ್ನಿಸುತ್ತಿದ್ದಾರೆ. ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ನೊಂದ ರೈತರು ಒತ್ತಾಯಿಸುತ್ತಿದ್ದಾರೆ.
ತನಿಖೆ ಏನಾಯ್ತು?
ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಬೀಳುಬಿದ್ದ ಹೊಲಕ್ಕೆ ವಿಮೆ ಪಾವತಿಸಿರುವ ಕುರಿತು ಸಾಕ್ಷಿ ಸಮೇತ ರೈತರು ದೂರು ಸಲ್ಲಿಸಿದರೂ ತನಿಖೆ ನೆಪದಲ್ಲಿ ಕಾಲಹರಣ ಮಾಡಲಾಗುತ್ತಿದೆ. ಡೋಣಿ ಗ್ರಾಮದ ಅನೇಕ ರೈತರು ಕಚೇರಿಗೆ ಬಂದು ದೂರು ಸಲ್ಲಿಸಿದರೂ ಜಿಲ್ಲಾಧಿಕಾರಿ ಸುಂದರೇಶಬಾಬು ಅವರು ಗಂಭೀರವಾಗಿ ಪರಿಗಣಿಸಿಲ್ಲ. ಯೋಜನೆಯಡಿ ಅನ್ಯಾಯ ಆಗಿದೆ ಎಂದು ಲಿಖಿತ ದೂರು ನೀಡಿದ ರೈತರು ಮರುದಿನ ತಮ್ಮ ಮನವಿಯನ್ನು ವಾಪಸ್ ಪಡೆದಿದ್ದಾರೆ. ಹೀಗಾದರೆ ತನಿಖೆ ಮಾಡುವುದು ಹೇಗೆ ಎಂದು ಕೃಷಿ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ. ಫಸಲ್ ಬಿಮಾ ಯೋಜನೆಯಡಿ ನಡೆದಿದೆ ಎನ್ನಲಾದ ವಂಚನೆಯ ದೂರುಗಳಿಗೆ ಸಂಬಂಧಿಸಿದಂತೆ ತಂಡಗಳನ್ನು ರಚಿಸಿ ತನಿಖೆ ಆರಂಭಿಸಲಾಗಿದ್ದು, ಈ ಕುರಿತು ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ವಾರದ ಹಿಂದೆ ಹೇಳಿದ್ದರು. ಆದರೆ, ತನಿಖೆ ಏನಾಯ್ತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕೋಟ್ಯಂತರ ರೂ. ಅನ್ಯರ ಪಾಲಾಗಿರುವುದು ಗೊತ್ತಿದ್ದರೂ ಉನ್ನತ ತನಿಖೆ ನಡೆಸಲು ಮುಂದಾಗುತ್ತಿಲ್ಲ. ಕೃಷಿ ಇಲಾಖೆಯ ಜಾರಿ ದಳ ಮತ್ತಿತರ ಅಧಿಕಾರಿಗಳನ್ನು ತನಿಖೆಗೆ ನಿಯೋಜಿಸಿದರೆ ಆರೋಪಿಗಳು ಸಿಕ್ಕಿಹಾಕಿಕೊಳ್ಳಲು ಸಾಧ್ಯವೇ? ಸ್ಥಳೀಯ ಅಧಿಕಾರಿಗಳ ಮೇಲೆ ಜನರಿಗೆ ನಂಬಿಕೆ ಇಲ್ಲದಂತಾಗಿದೆ.
ಫಸಲ್ ಬಿಮಾ ಯೋಜನೆಯಡಿ ಡೋಣಿ ಗ್ರಾಮದಲ್ಲಿ ನಡೆದ ಅವ್ಯವಹಾರ ಕುರಿತು ತನಿಖೆ ಮುಂದುವರಿದಿದೆ. ವಿಮೆ ಮಾಡಿಸಿದ ಬಹುತೇಕರು ಹೊಲದ ಮಾಲೀಕರ ಸಂಬಂಧಿಕರು ಎಂದು ಗೊತ್ತಾಗಿದ್ದು ಪರಿಶೀಲನೆ ನಡೆಸಲಾಗುತ್ತಿದೆ.
| ವೀರೇಶ ಹುನಗುಂದ, ಕೃಷಿ ಇಲಾಖೆ ಜಂಟಿ ನಿರ್ದೇಶಕ
ನಿರ್ದಿಷ್ಟ ಬೆಳೆಗೆ ಇಳುವರಿ ಆಧಾರದ ಮೇಲೆ ಬೆಳೆ ವಿಮೆ ಪರಿಹಾರ ನೀಡುವುದು ಫಸಲ್ ಬಿಮಾ ಯೋಜನೆಯ ಉದ್ದೇಶ. ಆದರೆ, ಜಮೀನಿನಲ್ಲಿ ಯಾವ ಬೆಳೆಯನ್ನಾದರೂ ಬಿತ್ತನೆ ಮಾಡಿರಲಿ. ಏಜೆಂಟರು ಹೇಳುವ ಬೆಳೆಗೆ ವಿಮೆ ಪಾವತಿಸಿದರೆ ಪರಿಹಾರದ ಹಣ ರೈತನ ಖಾತೆಗೆ ಜಮಾ ಆಗಲಿದೆ. ಜಮಾ ಆಗಿರುವ ಹಣದಲ್ಲಿ ಶೇ. 60ರಷ್ಟು ರೈತನಿಗೆ, ಉಳಿದ ಶೇ. 40ರಷ್ಟು ಹಣ ಮಧ್ಯವರ್ತಿಗಳ ಪಾಲಾಗುತ್ತದೆ ಎಂಬ ಆರೋಪ ವ್ಯಾಪಕವಾಗಿದೆ.