ಜಿಲ್ಲೆ

ಬೆಳೆ ವಿಮೆ ಪರಿಹಾರಕ್ಕಾಗಿ ರೈತರ ಪ್ರತಿಭಟನೆ

ಶಿಗ್ಗಾಂವಿ: ಬೆಳೆ ವಿಮೆ ಜಮೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ತಾಲೂಕಿನ ದುಂಡಸಿ ಗ್ರಾಮದ ರೈತ ಸಂಪರ್ಕ ಕೇಂದ್ರದ ಎದುರು ನೂರಾರು ರೈತರು ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಈಶ್ವರಗೌಡ್ರ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, 2018-19ನೇ ಸಾಲಿನಲ್ಲಿ ಬಿಡುಗಡೆಯಾದ ಬೆಳೆ ವಿಮೆ ಹಣ ಎರಡು ದಿನಗಳಲ್ಲಿ ರೈತರಿಗೆ ವಿತರಿಸಬೇಕು. ಕಬ್ಬು ಬೆಳೆಗೆ ವಿಮೆ, ವಿಮೆ ಕಂತು ಪಾವತಿ ಅವಧಿಯನ್ನು ಆ. 15ರವರೆಗೆ ವಿಸ್ತರಣೆ ಮಾಡಬೇಕು. ಯೂರಿಯೂ ಗೊಬ್ಬರವನ್ನು ರೈತರಿಗೆ ಸಕಾಲಕ್ಕೆ ಸಿಗುವಂತೆ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

ಆ. 10ರೊಳಗಾಗಿ 2018ನೇ ಸಾಲಿನ ಬೆಳೆ ವಿಮೆ ಹಣ ವಿತರಣೆಯಾಗದಿದ್ದಲ್ಲಿ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ದೀಕ್ಷಿತ್, ಅಗತ್ಯ ಬೇಡಿಕೆಗಳನ್ನು ತ್ವರಿತಗತಿಯಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದರು ಬಳಿಕ ರೈತರು ಪ್ರತಿಭಟನೆಯಿಂದ ಹಿಂಪಡೆದರು. ಶೇಖರಯ್ಯ ಹಿರೇಮಠ, ನೀಲಕಂಠಗೌಡ ಪಾಟೀಲ, ರುದ್ರಗೌಡ ಪಾಟೀಲ, ಶಂಕ್ರಪ್ಪ ಬೂಧಿಹಾಳ, ಚನ್ನಬಸಗೌಡ ಪಾಟೀಲ, ಬಾಬಣ್ಣ ಧರಣೇಪ್ಪನವರ, ಸಂತೋಷ ಲಾಭಗೊಂಡ, ಶಂಭು ಹರಕುರಣಿ, ಯಲ್ಲಪ್ಪ ತಗಡಿನಮನಿ, ಸುರೇಶ ಗೌಡ ಪಾಟೀಲ, ಪವನ ದೇಸಾಯಿ, ವೀರಭದ್ರಪ್ಪ ವಾಲಿಶೆಟ್ಟರ, ಯಲ್ಲಪ್ಪ ಬಾರ್ಕೆರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.