ಮೈಸೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ 2025-26ನೇ ಸಾಲಿನ ಬೆಳೆ ವಿಮೆಗೆ ನೋಂದಣಿ ಶುರುವಾಗಿದೆ. ಪ್ರಕೃತಿ ವಿಕೋಪ ಹಾಗೂ ಕೀಟರೋಗ ಬಾಧೆಯಿಂದ ಬೆಳೆನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಭದ್ರತೆ ಕಲ್ಪಿಸಲಾಗುತ್ತದೆ
.
ಬೆಳೆಸಾಲ ಪಡೆದ ಹಾಗೂ ಬೆಳೆಸಾಲ ಪಡೆಯದ ರೈತರು ಬೆಳೆ ವಿಮೆಯಡಿ ಒಳಪಡುವುದು ಐಚ್ಛಿಕವಾಗಿರುತ್ತದೆ. ಬೆಳೆಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ, ಈ ಕುರಿತು ಬ್ಯಾಂಕ್ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.
ಅಭಿಸೂಚಿಸಲಾದ ಬೆಳೆಗಳಿಗೆ ರೈತರು ತಮ್ಮ ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಪ್ರತಿಗಳೊಂದಿಗೆ ಸಮೀಪದ ಬ್ಯಾಂಕ್ ಅಥವಾ ನಾಗರಿಕ ಸೇವಾ ಕೇಂದ್ರಗಳು ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ಮಳೆ ಅಭಾವದಿಂದ ವಿಮಾ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ದೀರ್ಘಕಾಲದ ತೇವಾಂಶ ಕೊರತೆ, ತೀವ್ರ ಬರಗಾಲ, ಮುಳುಗಡೆ ಮುಂತಾದವುಗಳಿಂದ ಯಾವುದೇ ಅಧಿಸೂಚಿತ ವಿಮಾ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ 15 ದಿನಗಳಿಗಿಂತ ಮೊದಲು ಬೆಳೆ ಹಾನಿಯಾಗಿದ್ದಲ್ಲಿ ಪರಿಹಾರ ಪಡೆದುಕೊಳ್ಳಬಹುದು. ಜತೆಗೆ, ಬೆಳೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೆ ಒಣಗಲು ಬಿಟ್ಟಂತಹ ಕಟಾವು ಮಾಡಿದ ಎರಡು ವಾರಗಳೊಳಗೆ (14 ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ಪರಿಹಾರ ಪಡೆಯಬಹುದಾಗಿದೆ.
ಎಳ್ಳು ಎಕರೆಗೆ 230 ರೂ. ಪಾವತಿಸಿದರೆ 11,500 ರೂ. ಪರಿಹಾರ ದೊರೆಯಲಿದೆ. ಉದ್ದು 262 ರೂ.ಗೆ 13100 ರೂ., ಹೆಸರು 266 ರೂ.ಗೆ 13300 ರೂ., ಅಲಸಂದೆ 240 ರೂ.ಗೆ 12000ರೂ. ಪರಿಹಾರ ದೊರೆಯಲಿದೆ. ವಿಮೆ ಪಾವತಿಸಲು ಜೂ. 30 ಕೊನೆಯ ದಿನವಾಗಿದೆ.
ನೆಲಗಡಲೆ 436 ರೂ.ಗೆ 21800 ರೂ., ಎಲೆಕೋಸು 604 ರೂ.ಗೆ 30200ರೂ., ಟೊಮ್ಯಾಟೋ 1132 ರೂ.ಗೆ 30200, ಜೋಳ 306 ರೂ.ಗೆ 56600ರೂ. ಪರಿಹಾರ ಸಿಗಲಿದೆ. ವಿಮೆ ಪಾವತಿಸಲು ಜು. 15 ಕೊನೆ ದಿನ. ಹತ್ತಿ 398 ರೂ.ಗೆ 19900ರೂ., ಮುಸುಕಿನ ಜೋಳ 425 ರೂ.ಗೆ 22600ರೂ., ತೊಗರಿ 384 ರೂ.ಗೆ 19200ರೂ., ರಾಗಿ ಮಳೆ ಆಶ್ರಿತ 340 ರೂ.ಗೆ 17000ರೂ., ರಾಗಿ ನೀರಾವರಿ 406 ರೂ.ಗೆ 20300ರೂ. ಪರಿಹಾರ ಸಿಗಲಿದ್ದು, ವಿಮೆ ಪಾವತಿಸಲು ಜು. 31 ಕೊನೆಯ ದಿನವಾಗಿದೆ. ಭತ್ತ ನೀರಾವರಿ 746 ರೂ.ಗೆ 37,300ರೂ. ಮತ್ತು ಹುರುಳಿ 406 ರೂ.ಗೆ 8200 ರೂ. ವಿಮೆ ಪರಿಹಾರ ದೊರೆಯಲಿದೆ.
ವಿಮೆ ಪಾವತಿಸಲು ಆ. 16 ಕೊನೆಯ ದಿನ. ಮೈಸೂರು ಜಿಲ್ಲೆಗೆ ಟಾಟಾ ಎಐಜಿ ವಿಮಾ ಕಂಪನಿ ನಿಗದಿಯಾಗಿರುತ್ತದೆ. ತಾಲೂಕಿನ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದು ಎಂದು ಕೃಷಿ ಸಹಾಯಕ ನಿರ್ದೇಶಕ ಬಿ.ಡಿ.ಜಯರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ