ಮೈಸೂರು: ದೇಶದಲ್ಲಿ ಕೃಷಿ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ರೋಗಗಳ ನಿಯಂತ್ರಣ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಇದರಿಂದ ರೈತರು ಬೆಳೆ ನಷ್ಟ ಅನುಭವಿಸುವಂತಾಗಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ ಕಳವಳ ವ್ಯಕ್ತಪಡಿಸಿದರು.
ಮೈಸೂರು ವಿವಿ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಉದಯೋನ್ಮುಖ ಸಸ್ಯ ರೋಗಕಾರಕಗಳ ಜಾಗತಿಕ ಅಪಾಯ, ರೋಗನಿರ್ಣಯ ಬಲಪಡಿಸುವುದು ಮತ್ತು ಪರಿಸರ ಸ್ನೇಹಿ ನಿರ್ವಹಣೆ’ ಕುರಿತ 2 ದಿನಗಳ ರಾಷ್ಟ್ರೀಯ ವಿಚಾರಸಂಕಿರಣ ಹಾಗೂ ಭಾರತೀಯ ಸಸ್ಯ ರೋಗಶಾಸ್ತ್ರಜ್ಞರ ಸಂಘದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿ ಸಾಕಷ್ಟು ಸಸ್ಯ ರೋಗಶಾಸ್ತ್ರಜ್ಞರಿದ್ದರೂ ಅನೇಕ ಬೆಳೆಗಳಲ್ಲಿ ಕಾಣಿಸಿಕೊಳ್ಳುವಂತಹ ರೋಗಗಳ ನಿಯಂತ್ರಣ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಇದರಿಂದ ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತಿದೆ. ಆದ್ದರಿಂದ ಕೃತಕ ಬುದ್ಧಿಮತ್ತೆ (ಎಐ), ಮಷಿನ್ ಲರ್ನಿಂಗ್‌ನಂತಹ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಸ್ಯಗಳಲ್ಲಿ ಕಂಡು ಬರುವ ರೋಗಗಳನ್ನು ಹತೋಟಿಗೆ ತರಬೇಕಿದೆ ಎಂದರು.
ಎಐ, ಮಷಿನ್ ಲರ್ನಿಂಗ್, ಡೀಪ್‌ಸೀಕ್‌ನಂತಹ ಆಧುನಿಕ ತಂತ್ರಜ್ಞಾನ ಎಲ್ಲ ಕ್ಷೇತ್ರಗಳನ್ನೂ ಪ್ರವೇಶಿಸಿದೆ. ಎಐ ಪರಿಸರ ಸ್ನೇಹಿಯಾಗಿದೆ. ಸಾಮಾಜಿಕ ವಿಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಈ ತಂತ್ರಜ್ಞಾನದಿಂದ ಮಹತ್ವದ ಪರಿವರ್ತನೆಗಳಾಗಿವೆ. ಸಸ್ಯಶಾಸ್ತ್ರ, ಕೃಷಿ ಕ್ಷೇತ್ರದಲ್ಲೂ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಪ್ರೊ.ಎಸ್.ಆರ್.ನಿರಂಜನ ಹೇಳಿದರು.
ಜಾಗತಿಕ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ವಿವಿಗಳು ಸ್ಥಾನ ಪಡೆದುಕೊಂಡಿಲ್ಲ. ದೇಶದ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ಜಾಗತಿಕ ಮಾನ್ಯತೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಆದ್ಯತೆ ಆಗಬೇಕಿದೆ ಎಂದವರು ಸಲಹೆ ನೀಡಿದರು.
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ವಿಶ್ರಾಂತ ಕುಲಪತಿ ಪ್ರೊ.ಎಸ್.ಎಸ್. ಚಹಲ್, ಭಾರತೀಯ ಸಸ್ಯ ರೋಗಶಾಸ್ತ್ರಜ್ಞರ ಸಂಘದ ಅಧ್ಯಕ್ಷ ಡಾ.ಪಿ.ಕೆ. ಚಕ್ರವರ್ತಿ, ಸಸ್ಯಶಾಸ್ತ್ರಜ್ಞ ಪ್ರೊ.ಎಚ್. ಶೇಖರ್‌ಶೆಟ್ಟಿ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ.ಜಿ.ಆರ್. ಜನಾರ್ದನ, ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ರಾಜ್‌ಕುಮಾರ್ ಎಚ್. ಗರಂಪಲ್ಲಿ, ಡಾ.ಕೆ.ಎನ್. ಅಮೃತೇಶ್ ಪಾಲ್ಗೊಂಡಿದ್ದರು.