ಚಿತ್ರದುರ್ಗ: ರಾಜ್ಯದಲ್ಲಿ ಬರಗಾಲವೆಂದು ರಾಜ್ಯ ಸರ್ಕಾರ ಘೋಷಿಸಿದ್ದು, ಎಲ್ಲ ಬೆಳೆಗಳು ನಷ್ಟವಾಗಿವೆ. ಹೀಗಾಗಿ ಪ್ರತಿ ಪಹಣಿದಾರ ರೈತನಿಗೆ ಕನಿಷ್ಠ 60ಸಾವಿರ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಕಿಸಾನ್ ಸಂಘದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ರೈತರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ನೆರವಿಗೆ ಧಾವಿಸಬೇಕು ಎಂದು ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ಮಾತನಾಡಿ, ಜಿಲ್ಲೆಯ ರೈತರಿಗೆ 2022-23, 2023-24ನೇ ಸಾಲಿನಲ್ಲಿ ಮೆಕ್ಕೆಜೋಳ, ಕಡಲೆ, ಹೆಸರು, ಈರುಳ್ಳಿ, ಸೂರ್ಯಕಾಂತಿ ಬೆಳೆಗಳಿಗೆ ವಿಮೆ ಪರಿಹಾರ ಬಂದಿಲ್ಲ. ಖಾಸಗಿ ವಿಮಾ ಕಂಪನಿಗಳಿಗೆ ಅನ್ನದಾತರ ಕುರಿತು ಕಾಳಜಿ ಇಲ್ಲ. ಕೇವಲ ಸಂಸ್ಥೆ ಉದ್ಧಾರಕ್ಕಾಗಿ ರೈತ ಸಮುದಾಯವನ್ನು ವಂಚಿಸುತ್ತಿದ್ದಾರೆ. ಆದ್ದರಿಂದ ಕ್ರಮದ ಜತೆಗೆ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.
ಜಮೀನುಗಳಿಗೆ ರೈತರು ಸಂಚರಿಸಲು ಶಾಶ್ವತ ರಸ್ತೆಗಳ ನಿರ್ಮಾಣ, ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ಬದಲು ಕನಿಷ್ಠ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಬರದ ಕಾರಣ 2022, 2023ನೇ ಸಾಲಿನಿಂದ ರೈತರು ಪಡೆದ ಎಲ್ಲ ಬೆಳೆ ಸಾಲ ಮನ್ನಾ ಮಾಡಬೇಕು, ಸಾವಯವ ಕೃಷಿಗೆ ಉತ್ತೇಜನ ನೀಡಬೇಕು ಎಂದು ಸರ್ಕಾರಕ್ಕೆ ಕೋರಿದರು.
ಪದಾಧಿಕಾರಿಗಳಾದ ರವಿತೇಜ, ಮಹಾದೇವಪ, ರಾಮರೆಡ್ಡಿ, ಎಂ.ಕೆ.ಪುರುಷೋತ್ತಮ ರೆಡ್ಡಿ, ಶ್ರೀಧರರೆಡ್ಡಿ, ತಿಲಕ್‌ರೆಡ್ಡಿ, ಹನುಮಂತರೆಡ್ಡಿ, ಹೊನ್ನರೆಡ್ಡಿ, ಪ್ರಕಾಶ್‌ರೆಡ್ಡಿ, ರಾಜು ಇತರರಿದ್ದರು.