ಜಿಲ್ಲೆ

ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಒತ್ತಾಯ

ಗುಂಡ್ಲುಪೇಟೆ: ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿ ನಿಯಂತ್ರಿಸುವುದು ಹಾಗೂ ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಬಂಡೀಪುರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಘಟನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು ಹುಲಿ ಯೋಜನೆಯ ಓಂಕಾರ ವಲಯದ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಹಿಂಡು ಕಳೆದ ಒಂದು ತಿಂಗಳಿಂದ ನಿರಂತರ ದಾಳಿ ಮಾಡಿ ಜಮೀನಿನಲ್ಲಿ ಬೆಳೆದ ಫಸಲುಗಳನ್ನು ನಾಶ ಮಾಡುತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟುತ್ತಿಲ್ಲ. ಕಂದಕಗಳಲ್ಲಿ ಹೂಳು ತುಂಬಿಕೊಂಡು ಬಿದ್ದಿದ್ದರೂ ಹೂಳೆತ್ತಿಸದೆ ಆನೆಗಳು ಪದೇ ಪದೆ ಹೊರಬರುತ್ತಿವೆ. ಸೋಲಾರ್ ತಂತಿ ಬೇಲಿ ದುರಸ್ತಿ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ. ಬೆಳೆ ನಷ್ಟದ ಪರಿಹಾರವನ್ನೂ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಮಾತನಾಡಿ, ಸದ್ಯದಲ್ಲೇ ಕಂದಕದಲ್ಲಿ ಹೂಳೆತ್ತಿಸುವುದು, ಸೋಲಾರ್ ಬೇಲಿಗಳನ್ನು ದುರಸ್ತಿ ಮಾಡಿಸಲಾಗುವುದು. ಅನುದಾನದ ಕೊರತೆಯಿಂದ ಬೆಳೆ ಪರಿಹಾರ ನೀಡಲು ವಿಳಂಬವಾಗಿದ್ದು ಸದ್ಯದಲ್ಲೇ ಕೊಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಸರ್ಕಲ್ ಇನ್‌ಸ್ಪೆಕ್ಟರ್ ಪರಶಿವಮೂರ್ತಿ, ಸಬ್ ಇನ್‌ಸ್ಪೆಪೆಕ್ಟರ್ ಸಾಹೇಬಗೌಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಪಿ.ನವೀನ್ ಕುಮಾರ್ ಇದ್ದರು.