ಚಿತ್ರದುರ್ಗ: ಈರುಳ್ಳಿ, ಶೇಂಗಾ ಹಾಗೂ ಮೆಕ್ಕೆಜೋಳ ಬೆಳೆ ನಷ್ಟಕ್ಕೆ ಪರಿಹಾರ ಹಾಗೂ ಬೆಳೆ ವಿಮೆ ಪರಿಹಾರಕ್ಕೆ ಒತ್ತಾಯಿಸಿ ರೈತರು ಸೋಮವಾರ ಪ್ರತಿಭಟಿಸಿದರು. ನಗರದ ಪ್ರವಾಸಿ ಮಂದಿರದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಡಿಸಿ ಕಚೇರಿ ಬಳಿ ರಸ್ತೆಯಲ್ಲಿ ಈರುಳ್ಳಿ ಸುರಿದು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಕಳೆದ ಆಗಸ್ಟ್‌ನಲ್ಲಿ ಮಳೆ ಹೆಚ್ಚಾಗಿದೆ ಹಾಗೂ ಮೋಡ ಕವಿದ ವಾತವರಣದಿಂದ ಈರುಳ್ಳಿ ನಾಶವಾಗಿದೆ. ಅಲ್ಪಸ್ವಲ್ಪ ಬೆಳೆ ಗುಣಮಟ್ಟವಿಲ್ಲದೆ ಮಾರುಕಟ್ಟೆಯಲ್ಲಿ ದರ ಕುಸಿತವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಆಂಧ್ರಪ್ರದೇಶ ಮಾದರಿ ಬೆಂಬಲ ಬೆಲೆಯಡಿ ಈರುಳ್ಳಿ ಖರೀದಿಸಬೇಕು. ಪ್ರತಿ ಎ ಕರೆಗೆ 30 ಸಾವಿರ ರೂ.ಈರುಳ್ಳಿ ಬೆಳೆ ನಷ್ಟಕ್ಕೆ ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಚಳ್ಳಕೆರೆ,ಮೊಳಕಾಲ್ಮೂರು,ಹಿರಿಯೂರು ತಾಲೂಕುಗಳಲ್ಲಿ ಬೆಂಕಿ,ಮಚ್ಚೆ ರೋಗದಿಂದ ಹಾಗೂ ಸಕಾಲಕ್ಕೆ ಮಳೆಯಾಗದೆ ಶೇಂಗಾ ಹಾಳಾಗಿದೆ. ಇದೇ ರೀತಿ ಮೆಕ್ಕೆಜೋಳ ನಾಶವಾಗುತ್ತಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಬೆಳೆ ನಷ್ಟ ಪರಿಹಾರ ಹಾಗೂ ಬೆಳೆ
ವಿಮೆ ಪರಿಹಾರ ವಿತರಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ರಾಜ್ಯರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ,ಚಿಕ್ಕಪ್ಪನಹಳ್ಳಿರುದ್ರಸ್ವಾಮಿ,ಶಾಂತಾಅಶೋಕ್,ಹಂಪಯ್ಯನ ಮಾಳಿಗೆ ಧನಂಜಯ, ಎಂ.ಬಿ.ತಿಪ್ಪೇಸ್ವಾಮಿ,ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಟಿ.ಮುನಿಸ್ವಾಮಿ, ಕರಿಬಸವಯ್ಯ, ಆರ್.ಚೇತನ್ ಯಳನಾಡು,ಒ.ಟಿ.ತಿಪ್ಪೇಸ್ವಾಮಿ,ಎಂ. ಎಸ್.ಪ್ರಭು,ಎನ್.ನಾಗರಾಜ,ಎಸ್.ಕೆ.ಕುಮಾರಸ್ವಾಮಿ ಮತ್ತಿತರ ಪ್ರಮುಖರು ಇದ್ದರು.
---