ಜಿಲ್ಲೆ

ಬೆಳೆ ಕಟಾವು ಏಕರೂಪ ದರ ನಿಗದಿಪಡಿಸಿ

ಚಿತ್ರದುರ್ಗ: ಜಿಲ್ಲಾದ್ಯಂತ ಕೃಷಿ, ತೋಟಗಾರಿಕೆ ಬೆಳೆಗಳ ಕಟಾವು ಮತ್ತು ಒಕ್ಕಲಿಗೆ ಬಳಸುವ ಯಂತ್ರಗಳಿಗೆ ಏಕರೂಪ ದರ ನಿಗದಿಪಡಿಸುವಂತೆ ಒತ್ತಾಯಿಸಿ ರಾಜ್ಯ ರೈತಸಂಘ, ಹಸಿರುಸೇನೆ ಕಾರ್ಯಕರ್ತರು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬೆಳೆಗಳ ಕಟಾವು ಯಂತ್ರಗಳ ಮಾಲೀಕರು ಜಿಲ್ಲೆಯ ರೈತರಿಂದ ದುಬಾರಿ ಶುಲ್ಕ ಪಡೆಯುತ್ತಿದ್ದು, ಕೂಡಲೇ ನಿಯಂತ್ರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ ಮಾತನಾಡಿ, ರೈತಸಮೂಹ ಕಳೆದ ವರ್ಷ ಅನಾವೃಷ್ಟಿ, ಈ ಬಾರಿ ಅತಿವೃಷ್ಟಿಯಿಂದ ತತ್ತರಿಸಿದೆ. ಸಾಲ ಸೇರಿ ಗಂಭೀರವಾದ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಉಳಿದ ಅಲ್ಪ-ಸ್ವಲ್ಪ ಬೆಳೆಗಳನ್ನು ಒಕ್ಕಲು ಮಾಡಿಕೊಳ್ಳಲು ಕೃಷಿ ಕಾರ್ಮಿಕರ ಕೊರತೆ ಇದೆ. ಹೀಗಾಗಿ ಅನಿವಾರ್ಯತೆಯನ್ನೇ ದುರುಪಯೋಗ ಮಾಡಿಕೊಳ್ಳಲು ಯಂತ್ರಗಳ ಮಾಲೀಕರು ಮುಂದಾಗಿದ್ದಾರೆ ಎಂದು ದೂರಿದರು.

ಹಿಂದಿನ ವರ್ಷ ಕೆಲವರು ರಾಗಿ ಕಟಾವಿಗೆ ತಲಾ 1 ಎಕರೆಗೆ 5ಸಾವಿರ ರೂ., ಇನ್ನೂ ಕೆಲವರು ಪ್ರತಿ ಗಂಟೆಗೆ 3,200ರಿಂದ 3,300 ರೂ. ವಸೂಲಿ ಮಾಡಿದ್ದಾರೆ. ಆದ್ದರಿಂದ ಯಾರಿಗೂ ಅನ್ಯಾಯವಾಗದಂತೆ ದರ ನಿಗದಿಗೆ ಮುಂದಾಗಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಪದಾಧಿಕಾರಿಗಳಾದ ಸದಾಶಿವಪ್ಪ, ತಿಪ್ಪೇಸ್ವಾಮಿ, ರಂಗಸ್ವಾಮಿ, ರವಿ, ಶಶಿಧರ್, ಮಂಜುನಾಥ್, ಜೆ.ನಿರಂಜನಮೂರ್ತಿ, ಕೃಷ್ಣಪ್ಪ ಇತರರಿದ್ದರು.