ಗುಂಡ್ಲುಪೇಟೆ: ಈ ಬಾರಿ ತಾಲೂಕಿಗೆ ಸಮರ್ಪಕವಾಗಿ ಮಳೆ ಬೀಳದ ಪರಿಣಾಮ ಬಿತ್ತನೆ ಮಾಡಿದ್ದ ಹೆಚ್ಚಿನ ಬೆಳೆಗಳು ಇಳುವರಿ ಬರದೆ ನಷ್ಟ ಅನುಭವಿಸುವಂತಾಗಿದೆ. ಜತೆಗೆ ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸದ ಕಾರಣ ಈಗಾಗಲೇ ಹಲವಾರು ಕಡೆಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿಯುತ್ತಿದ್ದು, ತಮ್ಮ ಜಮೀನುಗಳಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್‌ಗಳ ಮೊರೆಹೋಗುವಂತಾಗಿದೆ.
ಈ ಬಾರಿ ಕಳೆದ ಆರೇಳು ತಿಂಗಳಿನಿಂದ ಮೋಡ ಮುಸುಕಿದ ವಾತಾವರಣವಿದ್ದರೂ ಸಮರ್ಪಕವಾಗಿ ಮಳೆ ಬಿದ್ದಿಲ್ಲ. ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸಾಕಷ್ಟು ಮಳೆ ಬೀಳದೆ ಹುರುಳಿ ಮತ್ತು ಮುಸುಕಿನ ಜೋಳ ಬಿತ್ತನೆ ಮೇಲೆ ತೀವ್ರ ಪರಿಣಾಮ ಬೀರಿದೆ. ಅಲ್ಲದೆ ಪೂರ್ವ ಮುಂಗಾರು ಮಳೆಗೆ ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಜೋಳ ಮುಂತಾದ ಬೆಳೆಗಳು ಕುಂಠಿತವಾಗಿದ್ದರಿಂದ ಇಳುವರಿ ಕುಸಿತವುಂಟಾಗಿದೆ. ಎಕರೆಗೆ ಎಂಟು-ಹತ್ತು ಕ್ವಿಂಟಾಲ್ ಬೆಳೆ ಬೆಳೆಯುತ್ತಿದ್ದ ಭೂಮಿಯಲ್ಲಿ ಕೇವಲ ಮೂರರಿಂದ ನಾಲ್ಕು ಕ್ವಿಂಟಾಲ್ ಇಳುವರಿ ಬಂದಿದೆ. ಇದರ ಬಿತ್ತನೆ ಬೀಜ, ಉಳುಮೆ ಹಾಗೂ ಕಟಾವು ಮಾಡಲು ಖರ್ಚು ಮಾಡಿದಷ್ಟು ಹಣವೂ ಸಿಗದೆ ಬೆಳೆಗಾರರು ತುಂಬ ನಷ್ಟ ಅನುಭವಿಸುವಂತಾಗಿದೆ.
ಕೊಳವೆ ಬಾವಿಗಳಲ್ಲೂ ನೀರಿಲ್ಲ: ಕಳೆದ ಎರಡು ವರ್ಷಗಳಿಂದ ತಾಲೂಕಿನ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸದ ಪರಿಣಾಮ ತಾಲೂಕಿನ ಹಲವಾರು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತವಾಗುತ್ತಿದೆ. ಈ ಹಿಂದೆ ಕೋಡಿ ಬಿದ್ದಿದ್ದ ದೊಡ್ಡ ದೊಡ್ಡ ಕೆರೆಗಳು ಬತ್ತಿಹೋಗಿರುವುದರಿಂದ ಕೊಳವೆ ಬಾವಿಗಳಲ್ಲಿ ಸಮರ್ಪಕ ಪ್ರಮಾಣದ ನೀರು ಲಭಿಸದೆ ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳನ್ನು ಉಳಿಸಿಕೊಳ್ಳುವುದು ರೈತರಿಗೆ ಭಾರಿ ಸವಾಲಾಗಿದೆ.
ಈಗಾಗಲೇ ಬಿತ್ತನೆ ಮಾಡಿರುವ ಅರಿಶಿಣ, ಈರುಳ್ಳಿ ಮುಂತಾದ ಬೆಳೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋಗುತ್ತಿದ್ದಾರೆ. ದೂರದೂರದ ಊರುಗಳ ಕೊಳವೆಬಾವಿಗಳಿಂದ ತರಿಸಿದ ನೀರನ್ನು ಕೃಷಿ ಹೊಂಡಗಳಿಗೆ ತುಂಬಿಸಿ ಬೆಳೆಗಳಿಗೆ ಉಣಿಸಲಾಗುತ್ತಿದೆ. ಪ್ರತಿ ಟ್ಯಾಂಕರ್ ನೀರಿಗೆ 800 ರೂ.ನಿಂದ ಒಂದು ಸಾವಿರ ರೂಪಾಯಿವರೆಗೂ ಪಾವತಿಸಿ ನೀರು ಖರೀದಿಸುವಂತಾಗಿದ್ದು, ತುಂಬ ದುಬಾರಿಯಾಗಿ ಪರಿಣಮಿಸಿದೆ.
ಹೆಚ್ಚುವರಿ ಪೈಪ್ ಅಳವಡಿಕೆ: ತಾಲೂಕಿನ ಶಿಂಡನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಂತರ್ಜಲ ಮಟ್ಟದಲ್ಲಿ ತೀವ್ರ ಕುಸಿತವಾಗುತ್ತಿದೆ. ಯಾವುದೇ ದೊಡ್ಡ ಕೆರೆಕಟ್ಟೆಗಳ ಆಶ್ರಯವಿಲ್ಲದ ಕಂದೇಗಾಲ, ಶಿಂಡನಪುರ, ಬೆಟ್ಟಹಳ್ಳಿ, ದೊಡ್ಡತುಪ್ಪೂರು, ತ್ರಿಯಂಭಕಪುರ, ಬೆರಟಹಳ್ಳಿ, ಬಲಚವಾಡಿ ಮುಂತಾದ ಗ್ರಾಮಗಳಲ್ಲಿ ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದೆ. ಇದರಿಂದ ರೈತರು ತಮ್ಮ ಕೊಳವೆ ಬಾವಿಗಳಿಗೆ ಇನ್ನೂ ಹೆಚ್ಚಿನ ಪೈಪ್ ಇಳಿಸಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದು ಆಗಲೂ ಸಮರ್ಪಕ ಪ್ರಮಾಣದ ನೀರು ಬರದಿದ್ದರೆ ಬೇರೆ ಬೇರೆ ಊರುಗಳಿಂದ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಎತ್ತರದ ಪ್ರದೇಶಗಳಲ್ಲಿರುವ ಜಮೀನುಗಳಲ್ಲಿರುವ ಕೊಳವೆಬಾವಿಗಳಲ್ಲಿಯೂ ನೀರಿನ ಲಭ್ಯತೆ ಕಡಿಮೆಯಾಗುತ್ತಿದ್ದು, ಇನ್ನಾದರೂ ಕೆರೆಗಳಿಗೆ ನದಿ ನೀರು ತುಂಬಿಸುವಂತೆ ಒತ್ತಾಯಗಳು ಕೇಳಿಬರುತ್ತಿವೆ.
ಕುಡಿಯುವ ನೀರಿನ ಸರಬರಾಜಿನ ಮೇಲೂ ಪರಿಣಾಮ:
ತಾಲೂಕಿನ ಎಲ್ಲ ಗ್ರಾಮಗಳಿಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಜಲಜೀವನ ಮಿಷನ್ ಯೋಜನೆಯ ಕಾಮಗಾರಿಯೂ ಬಹುತೇಕ ಪೂರ್ಣಗೊಂಡಿದ್ದು, ಮನೆ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ವಿದ್ಯುತ್ ಕಡಿತ ಮತ್ತು ಅಂತರ್ಜಲ ಕೊರತೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶಿಂಡನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಎಲ್ಲ ಕೊಳವೆಬಾವಿಗಳಲ್ಲಿಯೂ ಅಂತರ್ಜಲ ಮಟ್ಟ ಕುಸಿದ ಪರಿಣಾಮ ಎಲ್ಲ ಮೋಟಾರುಗಳನ್ನು ಮತ್ತಷ್ಟು ಆಳಕ್ಕೆ ಬಿಡಲಾಗುತ್ತಿದೆ.
ಬಿತ್ತನೆ ಎಷ್ಟೆಷ್ಟು? ಈ ಬಾರಿ ತಾಲೂಕಿನಲ್ಲಿ 9 ಸಾವಿರ ಹೆಕ್ಟೇರ್‌ನಲ್ಲಿ ಸಣ್ಣಜೋಳ, 1600 ಹೆಕ್ಟೇರ್ ಮುಸುಕಿನಜೋಳ, 10,500 ಹೆಕ್ಟೇರ್ ಸೂರ್ಯಕಾಂತಿ, 600 ಹೆಕ್ಟೇರ್‌ನಲ್ಲಿ ಅಲಸಂದೆ, 100 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 3,200 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಉತ್ತಮ ಮಳೆಬಿದ್ದು ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸಿದ್ದರಿಂದ ಕಲ್ಲುಕಟ್ಟೆಹಳ್ಳ ಜಲಾಶಯ ಕೋಡಿ ಬಿದ್ದಿತ್ತು. ಇದರಿಂದ ನಮ್ಮ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕೊಳವೆಬಾವಿಗಳಲ್ಲಿ ನೀರು ದೊರಕುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೆರೆಗಳಿಗೆ ನೀರು ಹರಿಸದ ಕಾರಣ ಅಂತರ್ಜಲ ಕುಸಿತವಾಗಿದೆ. ಜತೆಗೆ ಈ ಬಾರಿ ಸರಿಯಾಗಿ ಮಳೆಯೂ ಬೀಳದಿರುವುದರಿಂದ ಜಮೀನಿನಲ್ಲಿ ಬೆಳೆದಿರುವ ಅರಿಶಿಣ ಬೆಳೆ ಉಳಿಸಿಕೊಳ್ಳಲು ಪ್ರತಿ ದಿನವೂ ಟ್ಯಾಂಕರುಗಳಲ್ಲಿ ನೀರು ತರಿಸಿ ಬೆಳೆಗಳಿಗೆ ಹರಿಸಲಾಗುತ್ತಿದೆ. ಆದ್ದರಿಂದ ಈ ಬಾರಿಯಾದರೂ ಜಿಲ್ಲಾಡಳಿತ ತಾಲೂಕಿನ ಎಲ್ಲ ಕೆರೆಗಳಿಗೂ ನದಿನೀರು ಹರಿಸಲು ಕ್ರಮಕೈಗೊಳ್ಳಬೇಕು. ಮಹೇಶ್, ಶಿಂಡನಪುರ,