ಗುಂಡ್ಲುಪೇಟೆ: ಕಳೆದ ಎರಡು ದಿನಗಳಿಂದ ಬಿದ್ದ ಮಳೆಗೆ ತಾಲೂಕಿನ ಬೆಳಚಲವಾಡಿ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ನಾಶವಾಗಿವೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದರ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಗುರುವಾರ ರಾತ್ರಿ ಬಿದ್ದ ಮಳೆಗೆ ಕೋಟೆಕೆರೆ ಕಡೆಯಿಂದ ಹರಿದು ಬಂದ ಭಾರಿ ಪ್ರಮಾಣದ ನೀರು ಬೆಳಚಲವಾಡಿ ಗ್ರಾಮದ ಮಹದೇವಮ್ಮ ಎಂಬುವರ ಜಮೀನಿಗೆ ನುಗ್ಗಿ ಕಬ್ಬು, ಬಾಳೆ ಹಾಗೂ ಇತ್ತೀಚೆಗೆ ಬಿತ್ತನೆ ಮಾಡಿದ್ದ ಅರಿಶಿನ ಸೇರಿದಂತೆ ಎಲ್ಲ ಬೆಳೆಗಳನ್ನು ಕೊಚ್ಚಿಕೊಂಡು ಹೋಗಿದೆ. ಸಮೀಪವಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಹಾಗೂ ಕೃಷಿ ಇಲಾಖೆಯ ಕಟ್ಟಡಗಳು ಜಲಾವೃತವಾಗಿವೆ.
ಕಳೆದ ಬಾರಿ ಕೋಟೆಕೆರೆ ಕೋಡಿಬಿದ್ದ ನಂತರ ಭಾರಿ ಪ್ರಮಾಣದ ನೀರು ಹರಿದುಬಂದು ದೊಡ್ಡ ಪ್ರಮಾಣದ ಬೆಳೆ ನಾಶ ಮಾಡಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿ ಕಾಲುವೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದ ಪರಿಣಾಮ ಕಷ್ಟಪಟ್ಟು ಬೆಳೆದ ಬೆಳೆಗಳು ನೀರುಪಾಲಾಗುತ್ತಿವೆ. ಘಟನೆ ನಡೆದ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.