ಜಿಲ್ಲೆ

ಬೆಳಗ್ಗೆ ಆ ಪಕ್ಷ, ಸಂಜೆಯಾಗುತ್ತಲೇ ಈ ಪಕ್ಷ, <em>ಚುನಾವಣೆ ಹೊಸ್ತಿಲಿನಲ್ಲಿ ಕಾರ್ಯಕರ್ತರ ಜಿಗಿದಾಟ</em>ಮುಖಂಡರು ತಬ್ಬಿಬ್ಬು

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಬೆಳಗ್ಗೆ ‘ಕಮಲ’ ಪಾಳಯ ಸೇರಿದ್ದವರು ಮಧ್ಯಾಹ್ನವಾಗುತ್ತಿದ್ದಂತೆ ‘ತೆನೆಹೊತ್ತ ಮಹಿಳೆ’ಗೆ ಜೈ ಎನ್ನುತ್ತಿದ್ದಾರೆ, ಸಂಜೆಯಾಗುತ್ತಿದ್ದಂತೆ ‘ಕೈ’ಬಲಪಡಿಸುತ್ತೇವೆ ಎಂದು ೋಷಿಸುತ್ತಾರೆ.
ಗ್ರಾಮಾಂತರ ಜಿಲ್ಲೆಯಲ್ಲಿ ಇಂಥ ಪ್ರಹಸನ ಕಂಡುಬರುತ್ತಿದ್ದು, ಚುನಾವಣೆ ಹೊಸ್ತಿಲಿನಲ್ಲಿ ಕಾರ್ಯಕರ್ತರ ಪಕ್ಷದಿಂದ ಪಕ್ಷಕ್ಕೆ ಜಿಗಿದಾಟ ಸದ್ದು ಮಾಡುತ್ತಿದೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗುಪಡೆಯುತ್ತಿದೆ, ದಿನಕ್ಕೊಂದು ಬಣ ಸೃಷ್ಟಿಯಾಗುತ್ತಿವೆ, ಗಲ್ಲಿಗೊಬ್ಬ ಮುಖಂಡ ಹುಟ್ಟಿಕೊಳ್ಳುತ್ತಿದ್ದಾನೆ, ಮುಖಂಡನ ಹಿಂದೆ ಹಿಂಬಾಲಕರು ಇಬ್ಭಾಗವಾಗುತ್ತಿದ್ದಾರೆ. ಇದರ ನಡುವೆ ಪಕ್ಷದಿಂದ ಪಕ್ಷಕ್ಕೆ ಜಿಗಿದಾಡುವ ಪ್ರಹಸನವೂ ಜೋರಾಗಿದೆ. ಕಾರ್ಯಕರ್ತರನ್ನು ಸಂಘಟಿಸಲು ಬೆವರು ಹರಿಸುತ್ತಿರುವ ಮುಖಂಡರು ಅವರನ್ನು ಪಕ್ಷದಲ್ಲೇ ಕಟ್ಟಿಹಾಕಿಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ ಅತ್ತ ಕಡೆ ಕಾರ್ಯಕರ್ತರು ವರಸೆ ಬದಲಿಸಿ ಮುಖಂಡರನ್ನೇ ತಬ್ಬಿಬ್ಬುಗೊಳಿಸುತ್ತಿದ್ದಾರೆ. ಏನೆಲ್ಲ ಸಾಹಸ ಮಾಡಿ ಕರೆ ತಂದು ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಜೈಕೂಗಿಸಿ ಅಪ್ಪಿಮುದ್ದಾಡಿದ ಕಾರ್ಯಕರ್ತರು ಇದ್ದಕ್ಕಿದ್ದಂತೆ ವರಸೆ ಬದಲಿಸುತ್ತಿರುವುದು ಮುಖಂಡರನ್ನು ಬೆಸ್ತು ಬೀಳಿಸುತ್ತಿದೆ.

ದುಡ್ಡು ಕೊಟ್ಟವರಿಗೆ ಜೈ
ಪಕ್ಷನಿಷ್ಠರನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಭಾಗಶಃ ಕಾರ್ಯಕರ್ತರು ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಕಾಯಕ ಮುಂದುವರಿಸಿದ್ದಾರೆ, ಅದರಲ್ಲೂ ಮೊದಲ ಬಾರಿಗೆ ರಾಜಕೀಯ ವಾಸನೆ ಗ್ರಹಿಸಿಕೊಂಡು ಬರುತ್ತಿರುವ ಯುವಸಮೂಹ ಯಾವ ಪಕ್ಷದ ಪರ ನಿಲ್ಲಬೇಕು ಎಂಬ ಗೊಂದಲದಲ್ಲಿದ್ದಾರೆ. ಯಾರೂ ದುಡ್ಡುಕೊಡುತ್ತಾರೋ ಅವರಿಗೆ ಬೆಂಬಲ ನೀಡಬೇಕು ಎಂಬ ವಾದ ಒಂದೆಡೆಯಾದರೆ, ಆ ಪಕ್ಷ ಗೆದ್ದರೆ! ಆ ಅಭ್ಯರ್ಥಿ ಶಾಸಕನಾದರೆ? ವೈಯಕ್ತಿಕವಾಗಿ ನನಗೇನು ಲಾಭ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಇದರ ಜತೆಗೆ ಗೆಲ್ಲುವ ಅಭ್ಯರ್ಥಿ ಯಾರು? ಮಣ್ಣು ಮುಕ್ಕುವವರ‌್ಯಾರು? ಎಂಬ ಲೆಕ್ಕಾಚಾರವೂ ಈ ಜಿಗಿದಾಟಕ್ಕೆ ಕಾರಣವಾಗುತ್ತಿದೆ.

ಪರಸ್ಪರ ಹದ್ದಿನ ಕಣ್ಣು: ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷದಲ್ಲೂ ಕಾರ್ಯಕರ್ತರನ್ನು ಹಿಡಿದಿಡುವ ಕೆಲಸ ನಡೆಯುತ್ತಿದೆ, ಮತ್ತೊಂದೆಡೆ ಅನ್ಯ ಪಕ್ಷದವರು ಯಾರೂ ನಮ್ಮ ಪಕ್ಷದ ಕಾರ್ಯಕರ್ತರನ್ನು ಹೈಜಾಕ್ ಮಾಡುತ್ತಿದ್ದಾರೆ ಎಂಬ ಬಗ್ಗೆ ಆಯಾ ವ್ಯಾಪ್ತಿಯ ಮುಖಂಡರು ಹದ್ದಿನ ಕಣ್ಣಿಟ್ಟಿದ್ದಾರೆ. ಯಾವುದೇ ಪಕ್ಷದಿಂದ ಕಾರ್ಯಕರ್ತರು ಮತ್ತೊಂದು ಪಕ್ಷ ಸೇರ್ಪಡೆಯಾದರು ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಚುರುಕಾಗುವ ಮಾತೃ ಪಕ್ಷದ ಮುಖಂಡರು ಹೇಗಾದರೂ ಮಾಡಿ ಅವರ ಮನವೊಲಿಸಿ ಮತ್ತೆ ಮಾತೃ ಪಕ್ಷಕ್ಕೆ ಕರೆತರುವ ಕಸರತ್ತು ಆರಂಭಿಸುತ್ತಾರೆ, ಇದರಿಂದ ಬೆಳಗ್ಗೆ ಮತ್ತೊಂದು ಪಕ್ಷಕ್ಕೆ ಹಾರಿದ್ದವರು ಮಧ್ಯಾಹ್ನದ ಹೊತ್ತಿಗಾಗಲೇ ಮಾತೃಪಕ್ಷದತ್ತ ಹೆಜ್ಜೆ ಹಾಕಿರುತ್ತಾರೆ.

ಮುಖಂಡರೊಂದಿಗೆ ಹಿಂಬಾಲಕರು: ಕಾರ್ಯಕರ್ತರು ದಿನವೊಂದರ ಮೂರು ಗಳಿಗೆಯಲ್ಲಿ ಮೂರು ಪಕ್ಷ ಬದಲಿಸುವುದು ಒಂದು ತೂಕವಾದರೆ ಸ್ಥಳೀಯ ಮುಖಂಡರದು ಮತ್ತೊಂದು ತೂಕವಾಗಿದೆ. ಚುನಾವಣಾ ಕಣದಲ್ಲಿನ ಆಕಾಂಕ್ಷಿಗಳು ಇಂಥ ಮುಖಂಡರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ನಾನಾ ತಂತ್ರ ರೂಪಿಸುತ್ತಿದ್ದಾರೆ. ಪಕ್ಷದಲ್ಲಿ ಹುದ್ದೆಗಳನ್ನು ನೀಡುವುದು, ಚುನಾವಣೆಯಲ್ಲಿ ಗೆದ್ದರೆ ಇಂತಿಂಥ ಸ್ಥಾನ ನೀಡುವ ಆಮಿಷ ಜತೆಗೆ ಕಾರ್ಯಕರ್ತರನ್ನು ನಿಭಾಯಿಸಲು ಇಂತಿಷ್ಟು ದುಡ್ಡು ಹೀಗೆ ನಾನಾ ಬಗೆಯಲ್ಲಿ ಮುಖಂಡರನ್ನು ಗಾಳಕ್ಕೆ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ಮುಖಂಡರನ್ನು ಬಲೆಗೆ ಕೆಡವಿದರೆ ನೂರಾರು ಕಾರ್ಯಕರ್ತರನ್ನು ಬಳಸಿಕೊಳ್ಳಬಹುದು ಎಂಬುದು ಆಕಾಂಕ್ಷಿಗಳ ಲೆಕ್ಕಾಚಾರವಾಗಿದೆ.

ಹೊಸ ಮತದಾರರಿಗೆ ಗಾಳ: ಇದೇ ಮೊದಲ ಬಾರಿಗೆ ಮತದಾನದ ಹಕ್ಕು ಪಡೆದ ಮತದಾರಿಗೆ ಗಾಳ ಹಾಕುತ್ತಿರುವ ಆಕಾಂಕ್ಷಿಗಳು ಮೊದಲ ಹಂತದಲ್ಲೇ ಪಕ್ಷದ ಕಾರ್ಯಕರ್ತರನ್ನಾಗಿ ೋಷಿಸಿ ಬುಕಿಂಗ್ ಮಾಡಿಕೊಳ್ಳುವ ತಂತ್ರಗಾರಿಕೆ ರೂಪಿಸುತ್ತಿದ್ದಾರೆ, ಜೋಷ್‌ನಲ್ಲಿರುವ ಹೊಸ ಮತದಾರರು ಇವರ ಗಾಳಕ್ಕೆ ಸುಲಭವಾಗಿ ಸಿಕ್ಕಿಹಾಕಿಕೊಂಡರೂ ಅಷ್ಟೇ ಸುಲಭವಾಗಿ ಕಳಸಿಕೊಳ್ಳುತ್ತಿದ್ದಾರೆ. ಆಕಾಂಕ್ಷಿಗಳಿಗೆ ಕಾರ್ಯಕರ್ತರ ಪಡೆ ಲೆಕ್ಕ ಕೊಡಬೇಕಾದ ಮುಖಂಡರು ಹೊಸ ಮತದಾರರ ಸೆಳೆಯಲು ಇನ್ನಿಲ್ಲದ ತಂತ್ರಕ್ಕೆ ಮೊರೆಹೋಗುತ್ತಿದ್ದಾರೆ.

ಬಿಜೆಪಿ ಸೇರ್ಪಡೆಯಾದ ಕೆಲವೇ ಗಂಟೆಯಲ್ಲಿ ಜೆಡಿಎಸ್‌ಗೆ ಮರುಸೇರ್ಪಡೆ: ಮಾಜಿ ಶಾಸಕರಿಂದ ಶಾಲು ಹಾಕಿಸಿಕೊಂಡು ಬಿಜೆಪಿ ಸೇರಿದ ಹಿರಿಯ ಮುಖಂಡರು ಕೆಲವೇ ಗಂಟೆಗಳ ಅಂತರದಲ್ಲಿ ತಾಲೂಕು ಜೆಡಿಎಸ್ ಪ್ರಧಾನಕಾರ್ಯದರ್ಶಿ ಜಿಎ.ರವೀಂದ್ರ ಹಾಗೂ ವಾರ್ಡ್ ಸದಸ್ಯ ವೈ.ಆರ್. ರುದ್ರೇಶ್ ಸಮ್ಮುಖದಲ್ಲಿ ಮಾತೃಪಕ್ಷಕ್ಕೆ ಮರು ಸೇರ್ಪಡೆಗೊಂಡ ರಾಜಕೀಯ ಪ್ರಹಸನ ದೇವನಹಳ್ಳಿಯಲ್ಲಿ ಬುಧವಾರ ನಡೆದಿದೆ.
ದೇವನಹಳ್ಳಿ 14 ನೇ ವಾರ್ಡ್‌ನ ಜೆಡಿಎಸ್‌ನ ನಿಷ್ಠಾವಂತ ಹಿರಿಯ ಮುಖಂಡರಾದ ಇ.ಸಿ. ಚನ್ನಬಸವರಾಜು ಮತ್ತು ಎ.ವಿ. ಸುಬ್ಬಯ್ಯಶೆಟ್ಟಿ ಈ ಪ್ರಹಸನಕ್ಕೆ ಸಾಕ್ಷಿಯಾದರು.
ದಿಢೀರ್ ಪ್ರಹಸನ!?: ಆರೋಗ್ಯ ವಿಚಾರಿಸಲು ಮಾಜಿ ಶಾಸಕ ಜಿ.ಚಂದ್ರಣ್ಣ ಹಾಗೂ ಪಿಳ್ಳಮುನಿಶಾಮಪ್ಪ ಮನೆಗೆ ಬಂದಿದ್ದರು. ಅವರು ದಿಢೀರ್‌ನೆ ನನಗೂ ಹಾಗೂ ನಮ್ಮ ಕಾರ್ಯಕರ್ತರಿಗೂ ಬಿಜೆಪಿ ಶಾಲು ಹೊದಿಸಿ ೆಟೋ ತೆಗೆಸಿಕೊಂಡರು ಅಷ್ಟೇ. ಆದರೆ ನಾವು ಜೆಡಿಎಸ್‌ನಲ್ಲಿಯೇ ಇದ್ದೇವೆ ಎಂದು ಚನ್ನಬಸವರಾಜು ಸಮಜಾಯಿಷಿ ನೀಡಿದ್ದು, ಇದಕ್ಕೆ ಹೌದೌದು ಎಂದು ಸುಬ್ಬಯ್ಯಶೆಟ್ಟಿ ಸಹ ತಲೆಯಾಡಿಸಿದ್ದಾರೆ.
ಜೆಡಿಎಸ್ ಆಕ್ಷೇಪ:
ಹಿರಿಯ ಮುಖಂಡರ ಆರೋಗ್ಯ ವಿಚಾರಿಸಿದ್ದರಲ್ಲಿ ತಪ್ಪಿಲ್ಲ. ಆದರೆ ಒಪ್ಪಿಗೆ ಪಡೆಯದೇ ಪಕ್ಷ ಸೇರ್ಪಡೆ ಮಾಡಿ ಪ್ರಚಾರ ಗಿಟ್ಟಿಸಿಕೊಂಡಿರುವುದು ಸರಿಯಲ್ಲ ಎಂದು ಜೆಡಿಎಸ್ ತಾಲೂಕು ಪ್ರಧಾನಕಾರ್ಯದರ್ಶಿ ರವೀಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.