ಚನ್ನರಾಯಪಟ್ಟಣ: ತಾಲೂಕಿನ ಬೆಳಗೀಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬೆಳಗೀಹಳ್ಳಿ ಗ್ರಾಮದ ಬಿ.ವಿ.ವಿವೇಕಾನಂದ ಅವಿರೋಧ ಆಯ್ಕೆಯಾದರು.
ಎಚ್.ಪಿ.ಕೃಷ್ಣೇಗೌಡ ನೀಡಿದ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಬಿ.ವಿ.ವಿವೇಕಾನಂದ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಅವರನ್ನೇ ಅವಿರೋಧವಾಗಿ ಆಯ್ಕೆಮಾಡಿ ಘೋಷಿಸಲಾಯಿತು.
ಬೆಳಗೀಹಳ್ಳಿ ಗ್ರಾಮ ಪಂಚಾಯಿತಿಯು 12 ಮಂದಿ ಸದಸ್ಯರ ಬಲ ಹೊಂದಿದ್ದು ಚುನಾವಣೆ ವೇಳೆ ಎಲ್ಲ ಸದಸ್ಯರು ಹಾಜರಿದ್ದರು. ತಾಲೂಕು ಪಂಚಾಯಿತಿ ಇಒ ಸುನೀಲ್‌ಕುಮಾರ್ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷ ಬಿ.ವಿ.ವಿವೇಕಾನಂದ್ ಮಾತನಾಡಿ, ಶಾಸಕ ಸಿ.ಎನ್.ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರ ಸಹಕಾರ ಹಾಗೂ ವಿಶ್ವಾಸ ಪಡೆದು ಕೆಲಸ ಮಾಡುವ ಮೂಲಕ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಮೂಲ ಸೌಲಭ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪಗಳ ನಿರ್ವಹಣೆ ಜತೆಗೆ ಎಲ್ಲ ಗ್ರಾಮಗಳಲ್ಲಿನ ಚರಂಡಿ ಹಾಗೂ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಈ ಬಾರಿ ತೀರ್ವ ಮಳೆಯಿಂದ ಜೌಗು ಪರಿಣಾಮ ಹಾಳಾಗಿರುವ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಅವಿರೋಧ ಆಯ್ಕೆಯಾದ ಬಿ.ವಿ.ವಿವೇಕಾನಂದ್ ಅವರನ್ನು ಪಂಚಾಯಿತಿ ವತಿಯಿಂದ ಅಭಿನಂದಿಸಲಾಯಿತು. ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ತೋಟಿ ಜಯರಾಮ್, ಗುತ್ತಿಗೆದಾರ ತೋಟಿ ನಾಗರಾಜ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷೀ ಗೋಪಿ, ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಸದಸ್ಯರಾದ ಮಂಜೇಗೌಡ, ಕುಮಾರ್, ಪುನೀತ್, ಶಂಕರೇಗೌಡ, ಶ್ವೇತಾ ವಿಶ್ವನಾಥ್, ಪ್ರೇಮಕುಮಾರಿ, ವನಿತಾ ಶಿವಕುಮಾರ್, ರತ್ನಮ್ಮ, ಆಶಾ, ಪಿಡಿಒ ಹರ್ಷವರ್ಧನ್, ಕಾರ್ಯದರ್ಶಿ ಟಿ.ಎನ್.ರಾಘವೇಂದ್ರ ಕುಮಾರ್, ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಇದ್ದರು.