ಮೈಸೂರು: ಕೆಎಸ್‌ಆರ್‌ಟಿಸಿ ನಿರ್ವಾಹಕ, ಚಾಲಕನ ಮೇಲಿನ ಹಲ್ಲೆ ಪ್ರಕರಣವನ್ನು ಖಂಡಿಸಿ ಎರಡು ಕನ್ನಡ ಪರ ಸಂಘಟನೆಗಳು ನಗರದಲ್ಲಿ ಮಂಗಳವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.
ನಗರದ ಹಳೇ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಸಾರಿಗೆ ಸಿಬ್ಬಂದಿ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿದ್ದಾರೆ. ಜತೆಗೆ, ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬೆಳಗಾವಿ ಜನಪ್ರತಿನಿಧಿಗಳಿಂದ ಕನ್ನಡಿಗರಿಗೆ ರಕ್ಷಣೆ ಇಲ್ಲದಂತಾಗಿದೆ. ಪೊಲೀಸ್ ಅಧಿಕಾರಿಗಳು ಮರಾಠಿ ಪುಂಡರ ಮತ್ತು ಬೆಳಗಾವಿ ಜನಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ದೂರಿದರು.
ಎಂಇಎಸ್ ಸಂಘಟನೆಯಿಂದ ಬೆಳಗಾವಿ ಕನ್ನಡಿಗರಿಗೆ ಒಂದಲ್ಲ ಒಂದು ರೀತಿ ಕಿರುಕುಳ ನೀಡುತ್ತಿದ್ದಾರೆ. ರಾಜ್ಯೋತ್ಸವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮರಾಠಿಗರು ಕಪ್ಪು ಬಾವುಟ ಪ್ರದರ್ಶನ ಮಾಡಿ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದರು.
ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಪದಾಧಿಕಾರಿಗಳಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗೋಪಿ, ಸಿದ್ದಪ್ಪ, ಪ್ಯಾಲೇಸ್ ಬಾಬು, ಗೋವಿಂದರಾಜು, ಸ್ವಾಮಿ, ಮದನ್, ಬೀಡಾ ಬಾಬು, ಹರೀಶ್‌ಕುಮಾರ್, ಮಾದಪ್ಪ, ಅರವಿಂದ, ಶಿವೇಗೌಡ, ಚಿನ್ನಪ್ಪ, ಸುನಿಲ್, ಶಿವಣ್ಣ ನಾಯಕ್ ಇದ್ದರು.
ಪ್ರಕರಣ ಖಂಡನೀಯ:
ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಈ ಪ್ರಕರಣ ಖಂಡನೀಯ. ಸಾರಿಗೆ ಸಿಬ್ಬಂದಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಹಾಕಿರುವ ಪ್ರಕರಣವನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ ಮೇಲಿಂದ ಮೇಲೆ ಶಾಂತಿ, ಸುವ್ಯವಸ್ಥೆಗೆ ಭಂಗವುಂಟು ಮಾಡುತ್ತಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ಮರಾಠಿಯಲ್ಲಿ ಪತ್ರ ವ್ಯವಹಾರ ನಡೆಸುವುದಾಗಿ ಭರವಸೆ ನೀಡಿರುವ ಬೆಳಗಾವಿ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರನ್ನು ರಾಜ್ಯದಿಂದ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಅವರು ಮರಾಠಿಗಳ ದಬ್ಬಾಳಿಕೆ, ದೌರ್ಜನ್ಯದ ಕುರಿತು ಮೌನ ವಹಿಸಿದ್ದಾರೆ ಎಂದು ದೂರಿದರು. ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮುಖಂಡರಾದ ಬಿ.ಎ.ಶಿವಶಂಕರ್, ಜಿ.ಪ್ರಕಾಶ್, ಕೆ.ಬಸವರಾಜಪ್ಪ, ಸಿದ್ದಪ್ಪ, ಪ್ರಭುಶಂಕರ್ ಇನ್ನಿತರರಿದ್ದರು.