ಬೆಳಗಾವಿ: ಬೆಳಗಾವಿ ಮಹಾನಗರದಲ್ಲಿ ಕನ್ನಡ ಕಡ್ಡಾಯ, ಪಾಲಿಕೆ ಆವರಣದಲ್ಲಿ ಕನ್ನಡ ಕಲಿಕಾ ಕೇಂದ್ರ ಆರಂಭಕ್ಕೆ ನಾಡ ವಿರೋಧಿ ಎಂಇಎಸ್ ಪುಂಡರು ತಗಾದೆ ತೆಗೆಯುವ ಮೂಲಕ ಮೊಂಡತನ ಪ್ರದರ್ಶಿಸಿದ್ದಾರೆ. ಕನ್ನಡ ನೆಲದಲ್ಲಿ ಕನ್ನಡ ಕಡ್ಡಾಯ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಮಹಾನಗರ ಪಾಲಿಕೆ ಮೇಯರ್ ಮಂಗೇಶ ಪವಾರ ಅವರನ್ನು ಮಂಗಳವಾರ ಎಂಇಎಸ್ ಮುಖಂಡರು ಭೇಟಿಯಾಗಿ ಕನ್ನಡ ಕಡ್ಡಾಯ ನಿಯಮ ರದ್ದುಪಡಿಸಬೇಕು. ಅಲ್ಲದೆ, ಆಡಳಿತದಲ್ಲಿ ಕಡ್ಡಾಯವಾಗಿ ಮರಾಠಿ ಭಾಷೆ ಬಳಕೆ ಮಾಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ವೇಳೆ ಕೆಲ ಮುಖಂಡರು ಕನ್ನಡದಲ್ಲಿ ದಾಖಲೆ ನೀಡಿದರೆ ಉಗ್ರ ಹೋರಾಟ ನಡೆಸುತ್ತೇವೆ ಎನ್ನುತ್ತಿದ್ದಂತೆ ಕೆರಳಿದ ಮೇಯರ್, ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ನಾಡ ದ್ರೋಹಿಗಳಿಗೆ ಮಂಗಳಾರತಿ ಮಾಡಿ ಕಳುಹಿಸಿದರು.
ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಕನ್ನಡ ಜಾಹೀರಾತು ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯ ಹಾಗೂ ಮಹಾನಗರ ಪಾಲಿಕೆಯಲ್ಲಿಯೇ ಕನ್ನಡ ಕಲಿಕಾ ಕೇಂದ್ರ ಆರಂಭಿಸುತ್ತಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಕನ್ನಡ ಕಡ್ಡಾಯ ಆದೇಶ ವಾಪಸ್ ಪಡೆದು ಮರಾಠಿ ಭಾಷೆಗೆ ಮೊದಲಾದ್ಯತೆ ನೀಡಬೇಕು ಎಂದು ಎಂಇಎಸ್ ಮರಿ ಪುಂಡರು ಬಾಲ ಬಿಚ್ಚಿದ್ದಾರೆ.
ಈಚೆಗೆ ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಪುರಷೋತ್ತಮ ಬಿಳಿಮಲೆ ಅಧಿಕಾರಿಗಳ ಸಭೆ ನಡೆಸಿ ಕನ್ನಡ ಅನುಷ್ಠಾನ ಕಡ್ಡಾಯ ಹಾಗೂ ಪ್ರತಿಯೊಬ್ಬರಿಗೆ ಕನ್ನಡ ಕಲಿಸಲು ಕಲಿಕಾ ಕೇಂದ್ರ ಆರಂಭಿಸಲಾಗುವುದು. ಅಲ್ಲದೆ, ಕನ್ನಡ ಬಗ್ಗೆ ನಿರ್ಲಕ್ಷೃ ವಹಿಸುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೆ ಎಂಇಎಸ್ ಮುಖಂಡರು ಹಾಗೂ ಮರಾಠಿ ಭಾಷಿಕ ಅಧಿಕಾರಿ, ಸಿಬ್ಬಂದಿ ವರ್ಗದವರು ಪರೋಕ್ಷವಾಗಿ ಕನ್ನಡ ವಿರೋಧಿ ಕೃತ್ಯಕ್ಕೆ ಮುಂದಾಗಿದ್ದಾರೆ. ಸರ್ಕಾರ ಕೂಡಲೇ ಕನ್ನಡ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದರು.
ಸರ್ಕಾರ ಬೆಳಗಾವಿ ಗಡಿಭಾಗದಲ್ಲಿ ಎಂಇಎಸ್ ಕನ್ನಡ ವಿರೋಧಿ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು. ಅಂತವರ ವಿರುದ್ಧ ಕ್ರಮಕೈಗೊಳ್ಳಬೇಕು. ಕನ್ನಡ ಕಡ್ಡಾಯ ಅನುಷ್ಠಾನ ಇನ್ನಷ್ಟು ಕಠಿಣವಾಗಲಿ. ಕನ್ನಡ ಕಡ್ಡಾಯ ವಿರೋಧಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕು. | ಅಶೋಕ ಚಂದರಗಿ ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಗಡಿಭಾಗದಲ್ಲಿ ಕನ್ನಡ ವಿರೋಧಿ ಚಟುವಟಿಕೆ ನಡೆಸುತ್ತಿರುವ ಎಂಇಎಸ್‌ಕೂಡಲೇ ನಿಷೇಧಿಸಬೇಕು. ಕನ್ನಡ ವಿರೋಧಿಸುವವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಪಾಲಿಕೆಯಲ್ಲಿ ಕನ್ನಡ ಹೊರತಾಗಿ ಬೇರೆ ಭಾಷೆ ಬಳಕೆ ಮಾಡಿದರೆ ಉಗ್ರ ಹೋರಾಟ ನಡೆಸುತ್ತೇವೆ. | ದೀಪಕ ಗುಡಗನಟ್ಟಿ ಕರವೇ ಜಿಲ್ಲಾಧ್ಯಕ್ಷ