ಧಾರವಾಡ: ನಗರದಲ್ಲಿರುವ ನೀರಾವರಿ ನಿಗಮದ ಕಚೇರಿಯನ್ನು ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರಕ್ಕೆ ವಿರೋಧ, ಅವ್ಯವಹಾರ ಎಸಗಿರುವ ನಿಗಮದ ಮುಖ್ಯ ಆಡಳಿತಾಧಿಕಾರಿ ಶಶಿಧರ ಬಗಲಿ ವಜಾ ಹಾಗೂ ಬೆಂಗಳೂರಿನಲ್ಲಿರುವ 9 ನಿಗಮ- ಕಚೇರಿಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸ್ಥಳಾಂತರಕ್ಕೆ ಆಗ್ರಹಿಸಿ ರೈತ ಸೇನಾ ಕರ್ನಾಟಕ ಸಮಿತಿ ಅಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಅವರು ನಿಗಮದ ಕಚೇರಿ ಎದುರು ಶುಕ್ರವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದರು.
ಇಲ್ಲಿನ ಶ್ರೀನಗರದಲ್ಲಿರುವ ನೀರಾವರಿ ನಿಗಮದ ಕಚೇರಿಯನ್ನು ಸೆ. 14ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಭಾಗದ ಸಾರ್ವಜನಿಕರಿಗೆ ಆಡಳಿತವು ಹತ್ತಿರವಾಗಿರಲು ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರ ಮಾಡಬಾರದು. ಕೃಷ್ಣಾ ಭಾಗ್ಯಜಲ ನಿಗಮವನ್ನು ಆಲಮಟ್ಟಿಗೆ, ನೀರಾವರಿ ನಿಗಮದ ಬೆಂಗಳೂರು ಮುಖ್ಯ ಕಚೇರಿಯನ್ನು ದಾವಣಗೆರೆಗೆ, ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮವನ್ನು ಬೆಳಗಾವಿಗೆ, ಸಕ್ಕರೆ ನಿರ್ದೇಶಕ, ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿಯನ್ನು ಬೆಳಗಾವಿಗೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯನ್ನು ಹುಬ್ಬಳ್ಳಿಗೆ, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯನ್ನು ಹಂಪಿಗೆ, ಮಾನವ ಹಕ್ಕುಗಳ ಆಯೋಗದ ಒಬ್ಬ ಸದಸ್ಯರ ಕಚೇರಿಯನ್ನು ಧಾರವಾಡಕ್ಕೆ, ಮಾಹಿತಿ ಹಕ್ಕು ಆಯೋಗದ ಇಬ್ಬರು ಆಯುಕ್ತರ ಕಚೇರಿಗಳನ್ನು ಕಲಬುರಗಿ ಮತ್ತು ಬೆಳಗಾವಿಗೆ ಹಾಗೂ 1 ಉಪ ಲೋಕಾಯುಕ್ತರ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾಂತರಿಸುವಂತೆ ಸರ್ಕಾರ 2019ರ ಜ. 10ರಂದು ಆದೇಶಿಸಿದೆ. ಸ್ಥಳಾಂತರ ಪ್ರಕ್ರಿಯೆ 2019ರ ಏ. 1ರೊಳಗೆ ಪೂರ್ಣಗೊಳಿಸುವಂತೆ ಆದೇಶಿಸಲಾಗಿತ್ತು. ಆದರೆ ಈವರೆಗೂ ಕಚೇರಿಗಳು ಸ್ಥಳಾಂತರಗೊಂಡಿಲ್ಲ. ಸರ್ಕಾರದ ಆದೇಶ ಕೂಡಲೇ ಅನುಷ್ಠಾನಗೊಳ್ಳಬೇಕು ಎಂದು ಸೊಬರದಮಠ ಆಗ್ರಹಿಸಿದ್ದಾರೆ.
ಕೆಎಎಸ್ ಕಿರಿಯ ಶ್ರೇಣಿ ಅಧಿಕಾರಿಯಾಗಿರುವ ಶಶಿಧರ ಬಗಲಿ ಸದ್ಯ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿಯಾಗಿದ್ದಾರೆ. ಅವ್ಯವಹಾರ, ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಅವರು ವಜಾ ಕೂಡ ಆಗಿದ್ದರು. ಅವರೀಗ ನಿಗಮದ ಕಚೇರಿಯನ್ನು ಬೆಳಗಾವಿ ಸುವರ್ಣಸೌಧಕ್ಕೆ ಸ್ಥಳಾಂತರ ಪ್ರಕ್ರಿಯೆಯಲ್ಲೂ ಅವ್ಯವಹಾರ ಎಸಗಿದ್ದಾರೆ. ಕೂಡಲೆ ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮಲ್ಲಣ್ಣ ಅಲೆಕಾರ, ಗುರು ರಾಯನಗೌಡರ, ಮಹೇಶ ನಾವಳ್ಳಿ, ಶ್ರೀನಿವಾಸ ಇನಾಮತಿ, ಚಿದಾನಂದ ಹುಬ್ಬಳ್ಳಿ, ಮಂಜುನಾಥ ನಾಗಾವಿ, ಈಶ್ವರಗೌಡ ಪಾಟೀಲ, ಮೃತ್ಯುಂಜಯ ಹಿರೇಮಠ, ಮಲ್ಲಿಕಾರ್ಜುನ ಬೂಮಣ್ಣವರ, ರುದ್ರಪ್ಪ ಕುಂದಗೋಳ, ಫಕ್ಕೀರಪ್ಪ ಜೋಗಣ್ಣವರ, ಇತರರು ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.
ಪರಾರಿಯಾದ ಅಧಿಕಾರಿ
ರೈತ ಸೇನಾ ಕಾರ್ಯಕರ್ತರು ನಿಗಮದ ಕಚೇರಿ ಎದುರು ಧರಣಿ ನಡೆಸುತ್ತಿದ್ದ ವೇಳೆ ಶಶಿಧರ ಬಗಲಿ ಕಚೇರಿಯಲ್ಲಿದ್ದರು. ಕಾರ್ಯಕರ್ತರ ಧರಣಿ ವಿಷಯ ತಿಳಿಯುತ್ತಿದ್ದಂತೆ ಮಧ್ಯಾಹ್ನ 12ರ ಸುಮಾರಿಗೆ ಕಚೇರಿಯಿಂದ ತೆರಳಿದರು. ಅವರ ಬಳಕೆಗೆ ಸರ್ಕಾರಿ ವಾಹನವಿದ್ದು, ಕಚೇರಿ ಎದುರು ನಿಲ್ಲಿಸಲಾಗಿತ್ತು. ಮುಂಬಾಗಿಲ ಬಳಿ ಧರಣಿ ಕುಳಿತಿರುವುದನ್ನು ಅರಿತು, ಪಕ್ಕದ ದಾರಿಯಲ್ಲಿ ಹೊರಬಂದು, ಆಟೋದಲ್ಲಿ ಪರಾರಿಯಾಗಿದ್ದು ಬೇಸರ ಮೂಡಿಸಿದೆ ಎಂದು ಸೊಬರದಮಠ ಪ್ರತಿಕ್ರಿಯಿಸಿದರು.