ಬೆಳಗಾವಿ: ಬೆಳಗಾವಿ ಸ್ಮಾರ್ಟ್ ಸಿಟಿಯು ಪ್ರತಿಷ್ಠಿತ ವಿಶ್ವಸಂಸ್ಥೆ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ ಏರ್ಪಡಿಸಿದ್ದ ಸರ್ವತೋಮುಖ ನಗರ ಸ್ಪರ್ಧೆಯ ಸ್ಮಾರ್ಟ್ ಸೊಲ್ಯೂಷನ್ಸ್ ಚಾಲೆಂಜ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದೆ.
ಪ್ಯಾನ್ ಸಿಟಿ ಇಂಪ್ಲಿಮೆಂಟೆಡ್ ಸೊಲ್ಯೂಷನ್ಸ್ ವಿಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಹಾಗೂ ಅದರ ಬಹು ಆಯಾಮದ ಒಳಗೊಳ್ಳುವಿಕೆಗಾಗಿ, ಬೆಳಗಾವಿ ಸ್ಮಾರ್ಟ್ ಸಿಟಿಯು ಮೊದಲ ಸ್ಥಾನವನ್ನು ಗಳಿಸಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗಳಾದ ‘ರವೀಂದ್ರ ಕೌಶೀಕ ಇ-ಗ್ರಂಥಾಲಯ, ಕಿಡ್ ಜೊನ್, 30 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆ, 10 ಹಾಸಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಅಭಿವೃದ್ಧಿ, ಬಿಮ್ಸ್ ಆಸ್ಪತ್ರೆ ಸುಧಾರಣೆ, ಮಹಾತ್ಮ ಫುಲೆ ಉದ್ಯಾನದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಫಿಜಿಯೋಥೆರಪಿ ಕೇಂದ್ರ ಅಭಿವೃದ್ಧಿ, ಕಣಬರ್ಗಿ ಕೆರೆ ಪುನರುಜ್ಜೀವನ ಇತ್ಯಾದಿ ಕಾಮಗಾರಿಗಳು ಪುರಸ್ಕಾರಕ್ಕೆ ಪಾತ್ರವಾಗಿವೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು, ವಿಶೇಷ ಚೇತನರಿಗಾಗಿ ಮಹಾತ್ಮ ಫುಲೆ ಉದ್ಯಾನವನವನ್ನು ಪ್ರಾರಂಭಿಸಲು ನಾನು ಪ್ರಸ್ತಾಪಿಸಿದಾಗ, ಇದು ತುಂಬಾ ಒಳ್ಳೆಯ ಕ್ರಮ ಎಂದು ಎಲ್ಲರೂ ಹೇಳಿದರು. ಯಾವುದೇ ನಗರವು 2,200 ವಿಶೇಷ ಸಾಮರ್ಥ್ಯವುಳ್ಳ ನಾಗರಿಕರಿಗೆ ಹಣವನ್ನು ಖರ್ಚು ಮಾಡುವುದಿಲ್ಲ, ಆದರೆ, ನಾವು ಮಾಡಿದವು. ಈ ಮಕ್ಕಳ ಮತ್ತು ಅವರ ಕುಟುಂಬಗಳ ಅಗತ್ಯವನ್ನು ನಾವು ಗುರುತಿಸಿದವು. ಈಗ ಆ ಉದ್ಯಾನವನವು ವಿಶೇಷ ಸಾಮರ್ಥ್ಯವುಳ್ಳವರಿಗೆ ಮಾತ್ರವಲ್ಲದೆ, ಆ ಮಕ್ಕಳ ಆಟ ಮತ್ತು ಓಡಾಟವನ್ನು ನೋಡುವ ಪ್ರತಿಯೊಬ್ಬರಿಗೂ ತೃಪ್ತಿ ಮತ್ತು ಸಂತೋಷ ನೀಡುವ ಕೇಂದ್ರವೂ ಕೂಡ ಆಗಿದೆ ಎಂದರು.
ಲೈಬ್ರರಿಗಳು ಮತ್ತು ಕಿಡ್ಸ್ ಕಾರ್ನರ್‌ಗಳನ್ನು ನಿರ್ಮಿಸುವುದು, ಓದುವುದು ಮತ್ತು ಕಲಿಯುವುದು ಮಾತ್ರವಲ್ಲ, ಇದು ಅಂತರ್ಗತ ನಿಯತಾಂಕಗಳನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಆಗಿದೆ. ನಾವು ಎಲ್ಲ ನಾಗರಿಕರಿಗಾಗಿ ವಿಶ್ವದ ಅತ್ಯಾಧುನಿಕ ಡಿಜಿಟಲ್ ಲೈಬ್ರರಿ ಮತ್ತು ಕಿಡ್ಸ್ ಕಾರ್ನರ್ ಅನ್ನು ನಿರ್ಮಿಸಿದ್ದೇವೆ. ಮಾನವ ಮತ್ತು ಕೃತಕ ಬುದ್ಧಿ ಮತ್ತೆಯಿಂದ ಸಹ ರಚಿಸಲಾದ ಇ-ಪುಸ್ತಕಗಳು ಹಾಗೂ ಡಿಪ್ಲೆಕ್ಸಿಕ್, ಎ.ಡಿ.ಎಚ್.ಡಿ, ಅಂಧ ನಾಗರಿಕರು ಮತ್ತು ಮಕ್ಕಳಿಗೂ ಸಹ ಇ-ಪುಸ್ತಕಗಳನ್ನು ನಾವು ಹೊಂದಿದ್ದೇವೆ. ನಮ್ಮಲ್ಲಿ ವಿಶೇಷ ಚೇತನರನ್ನು ಹೊರತುಪಡಿಸಿ ಹಿರಿಯರು, ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಭಾಷಾ ಕಲಿಕೆಯ ವ್ಯವಸ್ಥೆ ಇದೆ. ನಾವು ಹಿರಿಯ ನಾಗರಿಕರಿಗಾಗಿ ಇ-ನ್ಯೂಸ್ ಪೇಪರ್ ಮತ್ತು ಇ-ಮ್ಯಾಗಜಿನ್ ಅನ್ನು ಹೊಂದಿದ್ದು, ಅವರು ಯಾವುದೇ ಅಕ್ಷರ ಗಾತ್ರ ಮತ್ತು ಡಿಜಿಟಲ್ ಮ್ಯಾಗ್ನಿಫೈಯರ್‌ಗಳಲ್ಲಿ ಓದಬಹುದು ಎಂದು ಹೇಳಿದರು.
ಪುರಸ್ಕಾರದ ಕುರಿತು: ಸ್ಮಾರ್ಟ್ ಸೊಲ್ಯೂಷನ್ಸ್ ಚಾಲೆಂಜ್ ನಗರ-ಮಟ್ಟದ ಸಮಸ್ಯೆ ಮತ್ತು ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಒಂದು ಯೋಜನೆಯ ಭಾಗವಾಗಿದೆ. ಈ ಯೋಜನೆಯ ಮೂಲಕ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 11 ಹಾಗೂ 11.7 ಅನ್ನು ಮುಂಬರುವ 2030ರ ಹೊತ್ತಿಗೆ ಮಹಿಳೆಯರು ಮತ್ತು ಮಕ್ಕಳು, ವೃದ್ಧರು ಮತ್ತು ವಿಶೇಷ ಚೇತನ ವ್ಯಕ್ತಿಗಳಿಗೆ ಸುರಕ್ಷಿತವಾದ ಹಸಿರೀಕರಣ ಮತ್ತು ಸಾರ್ವಜನಿಕ ಸ್ಥಳಗಳಿಗೆ ಸಾರ್ವತ್ರಿಕ ಪ್ರವೇಶ ಒದಗಿಸುವುದಾಗಿದೆ.