ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿ ಡಾ.ಕೆ.ತ್ಯಾಗರಾಜನ್ ಅವರನ್ನು ಇಲಾಖೆ ಸಿಬ್ಬಂದಿ ಸನ್ಮಾನಿಸಿ, ಬೀಳ್ಕೊಟ್ಟರು. ನೂತನ ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ, ಪೊಲೀಸ್ ಅಧಿಕಾರಿಗಳಾದ ಡಾ.ವಿಕ್ರಂ ಆಮ್ಟೆ, ಪಿ.ಬಿ.ಸ್ನೇಹಾ, ಸಿದ್ದನಗೌಡ ಪಾಟೀಲ, ನಾರಾಯಣ ಭರಮನಿ ಇತರರಿದ್ದರು. 
ಜಿಲ್ಲೆ

ಬೆಳಗಾವಿ ಸೇವೆ ಸಾರ್ಥಕತೆ ತಂದಿದೆ

Belagavi

ಬೆಳಗಾವಿ: ಸುಮಾರು ಒಂದೂವರೆ ವರ್ಷದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದರ ಜತೆಗೆ ಕರೊನಾ ನಡುವೆಯೂ ಅಪರಾಧ ಕೃತ್ಯಗಳನ್ನು ನಿಯಂತ್ರಿಸಿ, ಉತ್ತಮ ಸೇವೆ ಸಲ್ಲಿಸಿರುವ ಸಾರ್ಥಕ ಭಾವವಿದೆ ಎಂದು ನಿರ್ಗಮಿತ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್ ಹೇಳಿದರು.

ನಗರದ ಕೆಎಲ್ಇ ಸಂಸ್ಥೆಯ ಜೀರಗೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಹಾಗೂ ನೂತನ ಪೊಲೀಸ್ ಆಯುಕ್ತರ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಇಲಾಖೆಯ ಎಲ್ಲ ಹಂತದ ಸಿಬ್ಬಂದಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರೊನಾ ಸಂದರ್ಭದಲ್ಲೂ ಹೊರ ರಾಜ್ಯಗಳಿಗೆ ತೆರಳಿ ಪ್ರಕರಣವೊಂದರ ಆರೋಪಿಗಳನ್ನು ಹಿಡಿದು ತಂದ ನಮ್ಮ ತಂಡದ ಕಾರ್ಯ ಅಭಿನಂದನೀಯ. ಇನ್ನು, ಕರೊನಾ ವೇಳೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪಾಲ್ಗೊಂಡಿದ್ದ ‘ಜನಸೇವಕ ಸಮಾರೋಪ’ ಸಮಾರಂಭದ ಕುರಿತು ಕಾನೂನು ಕ್ರಮಕ್ಕೆ ಖುದ್ದು ಹೈಕೋರ್ಟ್ ಸೂಚಿಸಿದ ಪ್ರಸಂಗ ಹೊರತುಪಡಿಸಿ, ಉಳಿದೆಲ್ಲ ಸಂದರ್ಭದಲ್ಲೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ ಎಂದರು. ನೂತನ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ ಮಾತನಾಡಿ, ಆರು ವರ್ಷಗಳಿಂದ ಬೆಂಗಳೂರಿನಲ್ಲಿಯೇ ಕಾರ್ಯ ನಿರ್ವಹಿಸಿದ್ದೇನೆ. ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡುವ ಆಸೆ ಇತ್ತು. ಇದೀಗ ಅವಕಾಶ ಲಭಿಸಿದ್ದು, ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದರು. ಸಂಚಾರ ವಿಭಾಗದ ಎಸಿಪಿ ಶರಣಪ್ಪ, ಕನ್ನಡ ಸಂಘಟನೆ ಮುಖಂಡರಾದ ದೀಪಕ ಗುಡಗನಟ್ಟಿ, ರಾಜಶೇಖರ ತಳವಾರ ಅನಿಸಿಕೆ ವ್ಯಕ್ತಪಡಿಸಿದರು. ಪೊಲೀಸ್ ಅಧಿಕಾರಿ ಸಿದ್ದನಗೌಡ ಪಾಟೀಲ ಇದ್ದರು.
ಡಿಸಿಪಿ ಡಾ.ವಿಕ್ರಂ ಆಮ್ಟೆ ಸ್ವಾಗತಿಸಿದರು. ಡಿಸಿಪಿ ಸ್ನೇಹಾ ವಂದಿಸಿದರು.

ಅನೇಕ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮೆಲ್ಲರಿಗೆ ಡಾ. ಕೆ.ತ್ಯಾಗರಾಜನ್ ಅವರು ಶಾಂತ ಸ್ವಭಾವದಿಂದ ಮಾರ್ಗದರ್ಶನ ನೀಡಿ, ನಮ್ಮ ತಂಡದ ಕೂಲ್ ಕ್ಯಾಪ್ಟನ್ ಆಗಿದ್ದರು.| ನಾರಾಯಣ ಭರಮನಿ ಅಪರಾಧ ವಿಭಾಗದ ಎಸಿಪಿ