ಬೆಳಗಾವಿ: ನಗರದ ಸ್ವಚ್ಛತೆಯಲ್ಲಿ ಮಹತ್ವದ ಪಾತ್ರ ವಹಿಸುವ ಪೌರಕಾರ್ಮಿಕರು, ತಮ್ಮ ಮುಷ್ಟಿಯಲ್ಲಿ ಜೀವದ ಹಂಗು ಹಿಡಿದುಕೊಳ್ಳುತ್ತಿದ್ದಾರೆ.
ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರು ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳದೆ ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಅದರಲ್ಲೂ ಮನೆಯಲ್ಲೇ ಆರೈಕೆ ಆಗುತ್ತಿರುವ ನೂರಾರು ಕರೊನಾ ಸೋಂಕಿತರು ಬಳಸಿದ ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್‌ಗಳನ್ನು ಪೌರ ಕಾರ್ಮಿಕರು ಬರಿಗೈಯಿಂದ ಹಿಡಿದು ವಿಲೇವಾರಿ ಮಾಡುತ್ತಿದ್ದು, ಅಪಾಯಕ್ಕೆ ಆಹ್ವಾನ ತಂದು ಕೊಳ್ಳುತ್ತಿದ್ದಾರೆ. ದೊಡ್ಡ ದೊಡ್ಡ ಹೋಟೆಲ್‌ಗಳ ತ್ಯಾಜ್ಯದ ನೀರಿನಿಂದ ಒಳ ಚರಂಡಿಗಳು ಲೀಕೇಜ್ ಆಗುತ್ತಿದ್ದು, ಪೌರಕಾರ್ಮಿಕರು ಬರಿಗೈಯಿಂದ ಒಳಚರಂಡಿ ದುರಸ್ತಿ ಮಾಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಗತ್ಯ ಹ್ಯಾಂಡ್‌ಗ್ಲೌಸ್, ಮಾಸ್ಕ್, ಶೂ ಸೇರಿ ಸುರಕ್ಷಾ ಕ್ರಮ ಅನುಸರಿಸುತ್ತಿಲ್ಲ. ಈ ಬಗ್ಗೆ ಗುತ್ತಿಗೆದಾರರಾಗಲಿ, ಪಾಲಿಕೆ ಅಧಿಕಾರಿಗಳಾಗಲಿ ಮುತುವರ್ಜಿ ವಹಿಸಿ, ಅವರಿಗೆ ತಿಳಿ ಹೇಳುತ್ತಿಲ್ಲ.
ಸಾರ್ವಜನಿಕರ ಆಕ್ಷೇಪ: ಕರೊನಾ ಹರಡದಂತೆ ತಡೆಗಟ್ಟುವುದಕ್ಕೆ ಜಿಲ್ಲಾಡಳಿತ ಹಾಗೂ ಪಾಲಿಕೆ ಜನಜಾಗೃತಿ ಮೂಡಿಸುತ್ತಿದೆ. ಆದರೆ, ಪೌರ ಕಾರ್ಮಿಕರಿಗೆ ಸುರಕ್ಷತಾ ಪರಿಕರ ವಿತರಿಸುವ ಕುರಿತು ಅಲಕ್ಷೃ ವಹಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಪ್ರಮುಖ ಮಾರುಕಟ್ಟೆ ಪ್ರದೇಶದ ಹೋಟೆಲ್‌ಗಳ ತ್ಯಾಜ್ಯ ವಿಲೇವಾರಿ ಮಾಡುವಾಗ ಪೌರಕಾರ್ಮಿಕರು ಸುರಕ್ಷತಾ ಕ್ರಮ ಅನುಸರಿಸದೇ ಬರಿ ಕೈಯಿಂದ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಕರೊನಾ ಉಲ್ಬಣದ ಪ್ರಸ್ತುತ ಸಮಯದಲ್ಲಿ ಸುರಕ್ಷಾ ಕ್ರಮ ಅನುಸರಿಸದಿರುವುದು, ಪಾಲಿಕೆ ಪರಿಸರ ವಿಭಾಗದ ಅಧಿಕಾರಿಗಳ ಕಾರ್ಯ ವೈಖರಿಯನ್ನು ಪ್ರಶ್ನಿಸುವಂತಿದೆ.
ಪಾಲಿಕೆಯ 127 ಕಾಯಂ ಪೌರಕಾರ್ಮಿಕರಿಗೆ ಕಸ ವಿಲೇವಾರಿಗೆ ಅಗತ್ಯ ಸುರಕ್ಷತಾ ವಸ್ತುಗಳನ್ನು ಪಾಲಿಕೆ ವತಿಯಿಂದ ವಿತರಣೆ ಮಾಡುತ್ತಿದ್ದೇವೆ. 900ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಗುತ್ತಿಗೆ ಪೌರಕಾರ್ಮಿಕರಿಗೆ ಗುತ್ತಿಗೆದಾರರೇ ಅಗತ್ಯ ಸುರಕ್ಷಾ ಪರಿಕರಗಳನ್ನು ವಿತರಿಸಬೇಕು. ಒಂದು ವೇಳೆ ಗುತ್ತಿಗೆದಾರರು ಪೌರ ಕಾರ್ಮಿಕರಿಗೆ ಸುರಕ್ಷತಾ ಪರಿಕರ ನೀಡದಿದ್ದರೆ ಪಾಲಿಕೆ ಪರಿಸರ ಅಧಿಕಾರಿಗಳು ಗುತ್ತಿಗೆದಾರರಿಂದ ಕೊಡಿಸಬೇಕು.| ಡಾ.ಸಂಜಯ ಡುಮ್ಮಗೋಳ ಪಾಲಿಕೆ ಆರೋಗ್ಯಾಧಿಕಾರಿ