ಸಂಡೂರು: ಭಾರತದ ಸಂವಿಧಾನ ಹೇಗಿರಬೇಕು, ಅದರಲ್ಲಿ ಯಾವೆಲ್ಲ ಅಂಶಗಳಿರಬೇಕು. ಈ ಮೂಲಕ ಯಾವ ಕಾನೂನು ರೂಪಿಸಬೇಕೆಂಬುದರ ಬಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಪೂರ್ವಸಿದ್ಧತೆ ಮಾಡಿಕೊಂಡಿದ್ದರು ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಹೇಳಿದರು.
ಪಟ್ಟಣದಲ್ಲಿ ಏ.24ರಂದು ಬಿಜೆಪಿಯಿಂದ ಆಯೋಜಿಸಿರುವ ಜನಾಕ್ರೋಶ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸೋಮವಾರ ಮಾತನಾಡಿದರು. ಕಾಂಗ್ರೆಸ್‌ನ ಆರನೇ ಗ್ಯಾರಂಟಿ ಬೆಲೆ ಏರಿಕೆಯಾಗಿದೆ. ಮುಸ್ಲಿಮರ ಓಲೈಕೆ, ದಲಿತರ ಹಣ ಲೂಟಿ, ರೈತರನ್ನು ಕಡೆಗಣಿಸಿದ ಭ್ರಷ್ಟ ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಹೋರಾಟಕ್ಕೆ ಪ್ರತಿ ಹಳ್ಳಿಯಿಂದಲೂ ಪಕ್ಷದ ಕಾರ್ಯಕರ್ತರು ಬರಬೇಕೆಂದು ಮನವಿ ಮಾಡಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ದಿವಾಕರ್ ಮಾತನಾಡಿ, ರಾಜ್ಯ ಸರ್ಕಾರ ದಲಿತರ ಹಣ ಲೂಟಿ ಮಾಡಿ ಆ ಹಣದಿಂದಲೇ ಪಕ್ಷದ ಚುನಾವಣೆ ವೆಚ್ಚ ನಿಭಾಯಿಸಿದೆ. ಕಾಂಗ್ರೆಸ್ ಸರ್ಕಾರದ ಹುಳುಕುಗಳನ್ನು ಬಯಲು ಮಾಡಿದ್ದಕ್ಕೆ 18 ಜನ ಬಿಜೆಪಿ ಶಾಸಕರನ್ನು ಸದನದಿಂದ ಅಮಾನತು ಮಾಡಲಾಯಿತು. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಏ.24ರಂದು ಬೆಳಗ್ಗೆ ಬಳ್ಳಾರಿ ಹಾಗೂ ಮಧ್ಯಾಹ್ನ ಹೊಸಪೇಟೆಯಲ್ಲಿ ಜನಾಕ್ರೋಶ ಯಾತ್ರೆ ನಡೆಯಲಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಜಿ.ಟಿ.ಪಂಪಾಪತಿ, ಮಂಡಲ ಅಧ್ಯಕ್ಷ ನಾನಾವಟೆ ನಿಕ್ಕಂ, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ಜಿಸಿಬಿ ರಾಮಕೃಷ್ಣ, ತಾಲೂಕು ಪ್ರ.ಕಾರ್ಯದರ್ಶಿ ಆರ್.ಟಿ.ರಘುನಾಥ, ಮಂಡಲ ಎಸ್.ಟಿ.ಮೋರ್ಚಾ ಅಧ್ಯಕ್ಷ ಹರ್ಷಾ ಪೂಜಾರ್, ವಾಡಾ ಮಾಜಿ ಅಧ್ಯಕ್ಷ ಕೆ.ಯರ‌್ರಿಸ್ವಾಮಿ, ಯುವ ಮೋರ್ಚಾ ಮಂಡಲ ಅಧ್ಯಕ್ಷ ಹರೀಶ್ ಕೊಂಚಿಗೇರಿ, ಕಚೇರಿ ಕಾರ್ಯದರ್ಶಿ ದರೋಜಿ ರಮೇಶ್, ಅಂತಾಪುರ ಶಂಕರ್, ಚಂದ್ರು, ತಾಯಪ್ಪ, ಚಂದ್ರಶೇಖರ್, ಕುಮಾರಸ್ವಾಮಿ ಇದ್ದರು.