ಬೆನಕಟ್ಟಿ: ಮಲಪ್ರಭಾ ಎಡದಂಡೆ ಕಾಲುವೆಯಿಂದ ಬೆನಕಟ್ಟಿ ಗ್ರಾಮಕ್ಕೆ ನೀರು ಒದಗಿಸುವ ಯೋಜನೆಗೆ ಮುಖ್ಯಮಂತ್ರಿ ಅನುಮೋದಿಸಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ತಿಳಿಸಿದರು.
ಗ್ರಾಮದ ನೂತನ ಪತ್ರಿವನ ಶ್ರೀ ಬಸವೇಶ್ವರ ಹಾಗೂ ಶಿವಲಿಂಗ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಯರಗಟ್ಟಿ ತಾಲೂಕಿಗೆ ಎಲ್ಲ ಇಲಾಖೆಯ ಕಚೇರಿ ಒದಗಿಸಬೇಕೆಂದು ಹೋರಾಟ ನಡೆಯುತ್ತಿದ್ದು, ನಾನೂ ಬೆಂಬಲ ನೀಡುತ್ತೇನೆ ಎಂದರು.
ಈಗಾಗಲೇ ತಹಸೀಲ್ದಾರ್ ಹಾಗೂ ಕಾರ್ಮಿಕ ಕಚೇರಿ ಪ್ರಾರಂಭಗೊಂಡಿವೆ. ಈಗಷ್ಟೇ ಸವದತ್ತಿ ಮತ್ತು ಯರಗಟ್ಟಿ ಬೇರ್ಪಟ್ಟು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾರಂಭಿಸಲು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಸತ್ತಿಗೇರಿ ಏತ ನೀರಾವರಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಯರಗಟ್ಟಿ ಮುನವಳ್ಳಿ ರಾಜ್ಯ ರಸ್ತೆಯನ್ನು ಒಂದು ತಿಂಗಳಲ್ಲಿ ದುರಸ್ತಿ ಮಾಡಲಾಗುವುದು. ಜಾಲಿಕಟ್ಟಿ ಗ್ರಾಮದಲ್ಲಿ 13 ಎಕೆರೆ ಪ್ರದೇಶದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 6ನೇ ತರಗತಿಯಿಂದ ಪಿಯುಸಿವರೆಗೂ ಕಲಿಯುವ ಮಕ್ಕಳಿಗೆ ವಸತಿ ಶಾಲೆ ತೆರೆಯಲು ಸರ್ಕಾರಕ್ಕೆ ಮಂಜೂರಾತಿಗೆ ಕಳಿಸಲಾಗಿದೆ. ಅದನ್ನು ಬೇಗನೆ ಅನುಮೋದನೆ ಪಡೆಯಲು ಪ್ರಯತ್ನಿಸುವೆ ಎಂದು ತಿಳಿಸಿದರು.
ಶ್ರೀಗಳನ್ನು ಬೆಳ್ಳಿ ರಥದಲ್ಲಿ ಭವ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ಶ್ರೀಗಳಿಗೆ ಗುರುವಂದನೆ ಜರುಗಿತು. ಶಾಸಕ ಹಾಗೂ ತಾಪಂ ಮಾಜಿ ಸದಸ್ಯರಿಗೆ ಶ್ರೀ ಬಸವೇಶ್ವರ ಕಂಚಿನ ಮೂರ್ತಿ ನೀಡಿ ಗೌರವಿಸಲಾಯಿತು.
ಹರಿಹರದ ವಚನಾನಂದ ಶ್ರೀ ದಿವ್ಯ ಸಾನ್ನಿಧ್ಯ, ಮುನವಳ್ಳಿಯ ಮುರುಘೇಂದ್ರ ಶ್ರೀ, ಢವಳೇಶ್ವರ-ಹರ್ಲಾಪುರದ ರೇಣುಕ ಶಿವಯೋಗಿ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು.
ತಾಪಂ ಮಾಜಿ ಸದಸ್ಯ ರುದ್ರಪ್ಪ ರೇವನ್ನವರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಫಕೀರಪ್ಪ ಹದ್ದನ್ನವರ, ಪುಂಡಲೀಕ ಮೇಟಿ, ಶ್ರೀಶೈಲ ಕುಸಲಿ, ಚಂದ್ರಶೇಖರ ಗಯ್ಯಳಿ, ಫಕೀರವ್ವ ಹೂಲಿ, ಬೀರಪ್ಪ ಕುರಿ, ಫಕೀರಪ್ಪ ಮೇಟಿ, ಎಂ ಎನ್. ಹೆಗ್ಗನ್ನವರ, ಮಲ್ಲಿಕಾರ್ಜುನ ಲಕ್ಕಪ್ಪನ್ನವರ, ಮಲ್ಲಿಕಾರ್ಜುನ ರೇವನ್ನವರ, ರೇವಪ್ಪ ಗಿಲಾಕಿ, ಬಸಪ್ಪ ಬಿಷ್ಟಣ್ಣವರ, ಮಹಾದೇವಪ್ಪ ಲಕ್ಕಣ್ಣವರ, ಬಿ.ಆರ್. ಮರ್ಚಪ್ಪನ್ನವರ, ನಾಗಪ್ಪ ರೈನಾಪೂರ, ತೇಜಪ್ಪ ವೀರಶೆಟ್ಟಿ ಇತರರಿದ್ದರು. ಶಿಕ್ಷಕ ಎಂ.ಎಂ. ಲಕ್ಕಣ್ಣವರ ನಿರೂಪಿಸಿದರು. ಎ.ಐ. ಶಿರಸಂಗಿ ಸ್ವಾಗತಿಸಿದರು.