ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಡೇ ಶ್ರಾವಣ ಶನಿವಾರ ಹಾಗೂ ಬೆನಕ ಅಮಾವಾಸ್ಯೆ ಅಂಗವಾಗಿ ಶನಿವಾರ ದೇಗುಲದ ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ದೇಗುಲದಲ್ಲಿ ಮುಂಜಾನೆ ಸೀತಾ, ರಾಮ, ಹನುಮ ಹಾಗೂ ಲಕ್ಷ್ಮಣ ದೇವರ ವಿಗ್ರಹಗಳಿಗೆ ಜೇನುತುಪ್ಪ, ಪಂಚಾಮೃತ ಅಭಿಷೇಕ, ಅರಿಶಿಣ ಹಾಗೂ ಹೂವಿನ ಅಲಂಕಾರ, ಮಹಾ ಮಂಗಳಾರತಿ ನೆರವೇರಿತು. ಬೆಳಗ್ಗೆ 10.30ರಲ್ಲಿ ಅದ್ದೂರಿ ಉತ್ಸವ ನಡೆಯಿತು. ಉತ್ಸವದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಉತ್ಸವ ಮುಗಿದ ನಂತರ ಸಾವಿರಾರು ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ದೇಗುಲದ ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ ಮಾತನಾಡಿ, ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಶನಿವಾರ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾವಿರಾರು ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ಪುರಾಣ ಪ್ರಸಿದ್ಧ ದೇವಾಲಯ ಆದುದ್ದರಿಂದ ವಿಶೇಷ ದಿನದಿಂದ ದಿನಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.