ಸಾಗರ: ಸಾಹಿತಿಗಳಿಗೆ ಬರವಣಿಗೆ ಮಾಡಲು ಮುಕ್ತ ಅವಕಾಶ ನೀಡಬೇಕು. ಬೆದರಿಕೆ ಹಾಕುವ ಮೂಲಕ ಬರವಣಿಗೆಯನ್ನು ತಡೆಯುವುದು ಸರಿಯಲ್ಲ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
ಹಿರಿಯ ಸಾಹಿತಿ ನಾ. ಡಿಸೋಜ ಅವರಿಗೆ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಸಾಗರದ ನೆಹರು ನಗರದ ನಿವಾಸದಲ್ಲಿ ಮಂಗಳವಾರ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದಿದೆ. ಬೇರೆ ಬೇರೆ ವಿಚಾರಧಾರೆ ಉಳ್ಳವರಿಂದ ಇಂತಹ ಕೆಲಸ ನಡೆದಿದೆ. ಚರ್ಚೆ ಮೂಲಕ ಸಮಸ್ಯೆ, ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕೇ ಹೊರತು ಹಿಂಸೆಗೆ ಇಳಿಯಬಾರದು ಎಂದರು.
ಸಾಹಿತಿ ಡಾ. ನಾ.ಡಿಸೋಜ ಅವರಿಗೆ ಬೆದರಿಕೆ ಪತ್ರ ಬಂದಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಅವರನ್ನು ಭೇಟಿಯಾಗಿ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಡಿಸೋಜ ಅವರ ಮನೆಗೆ ಭೇಟಿ ನೀಡಿ ವರದಿ ಪಡೆಯಲು ನಗರ ಠಾಣೆ ಸಿಪಿಐಗೆ ತಿಳಿಸಲಾಗಿತ್ತು. ಅದರಂತೆ ಅವರು ಮಾಹಿತಿ ಪಡೆದಿದ್ದಾರೆ. ಘಟನೆ ಸಂಬಂಧ ಎಸ್ಪಿ ಜತೆ ಸಹ ಮಾತುಕತೆ ನಡೆಸಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ನಗರ ಠಾಣೆಗೆ ದೂರು ನೀಡಲು ಸಾಹಿತಿ ನಾ.ಡಿಸೋಜ ಅವರಿಗೆ ಸಲಹೆ ನೀಡಿದ್ದೇನೆ ಎಂದು ಹೇಳಿದರು.
ಇನ್ನಷ್ಟು ದೊಡ್ಡದು ಮಾಡುವ ಇಷ್ಟವಿಲ್ಲ:
ಆರು ತಿಂಗಳ ಹಿಂದೆ ಎರಡು ಬೆದರಿಕೆ ಪತ್ರ ಬಂದಿತ್ತು. ಪತ್ರದಲ್ಲಿ ವಿಳಾಸ ಇಲ್ಲ. ದಾವಣಗೆರೆಯಿಂದ ನನಗೆ ಪತ್ರ ಬಂದಿದೆ. ನನಗೆ ಪ್ರತಿದಿನ ಹತ್ತಾರು ಪತ್ರಗಳು ಅಂಚೆ ಮೂಲಕ ಬರುತ್ತದೆ. ನನ್ನ ಸಾಹಿತ್ಯ ಹೊಗಳಿಯೋ, ವಿಮರ್ಶೆ ಮಾಡಿಯೋ ಪತ್ರ ಬರುವುದು ಸಹಜ. ಆದರೆ ಎರಡು ಅನಾಮಧೇಯ ಪತ್ರ ಬಂದಾಗ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅನಗತ್ಯವಾಗಿ ಪೊಲೀಸರಿಗೆ ದೂರು ನೀಡಿ ವಿಷಯವನ್ನು ಇನ್ನಷ್ಟು ದೊಡ್ಡದು ಮಾಡುವ ಇಷ್ಟವಿಲ್ಲ ಎಂದು ಡಾ. ನಾ.ಡಿಸೋಜ ಪ್ರತಿಕ್ರಿಯಿಸಿದರು.