ಆನೇಕಲ್: ಕರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಸೂಕ್ತ ಸಮಯಕ್ಕೆ ಬೆಡ್ ಹಾಗೂ ಆಕ್ಸಿಜನ್ ಸಿಗದೆ ರೋಗಿಗಳು ನರಳಾಟ ನಡೆಸಿ ಸಾವನ್ನಪ್ಪುತ್ತಿದ್ದಾರೆ. ಇಷ್ಟಾದರೂ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿ ದಲಿತ ಮತ್ತು ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದಿಂದ ಆನೇಕಲ್ ಸರ್ಕಾರಿ ಆಸ್ಪತ್ರೆ ಮುಂಭಾಗ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಭಿತ್ತಿಚಿತ್ರ ಹಿಡಿದು ಸರ್ಕಾರದ ವಿರುದ್ಧ ೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ರಾವಣ ಮಾತನಾಡಿ, ತಾಲೂಕಿನ ಆಸ್ಪತ್ರೆಗಳಲ್ಲಿ ಪ್ರತಿದಿನ ಸೋಂಕಿತರಿಗೆ ಸೂಕ್ತ ಸಮಯಕ್ಕೆ ಬೆಡ್ ಹಾಗೂ ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಸಭೆ ನಡೆಸಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರ್ತಿ ಮಮತಾ ಮಾತನಾಡಿ, ತಾಲೂಕಿನ ಹಲವು ಕಡೆ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಅಲ್ಪ ಸಿಬ್ಬಂದಿಗೂ ಸುರಕ್ಷತಾ ಕಿಟ್ ನೀಡಿಲ್ಲ. ಈಗಾಗಲೇ ಆಕ್ಸಿಜನ್ ಇಲ್ಲದೆ ಜನ ರಸ್ತೆಯಲ್ಲಿ ಬಿದ್ದು ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲಾ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದರು.
ಹೋರಾಟಗಾರ ಗೌತಮ್ ವೆಂಕಿ ಮಾತನಾಡಿ, 10 ದಿನಗಳಿಂದ ನಿರಂತರವಾಗಿ ಆನೇಕಲ್ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ಬಳಿ ಜನ ದಿನವೊಂದಕ್ಕೆ ಐದರಿಂದ ಆರು ಹೆಣಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಕರೊನಾ ಬಂದರೆ ಎಲ್ಲಿಯೂ ಬೆಡ್ ಸಿಗುತ್ತಿಲ್ಲ. ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ 8 ವೆಂಟಿಲೇಟರ್ ಇದ್ದರೂ ನಿರ್ವಹಣೆ ಇಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ವೆಂಟಿಲೇಟರ್ ಬಳಕೆಗೆ ಮುಂದಾಗಬೇಕು ಎಂದರು.
ಸ್ಥಳೀಯ ನಾಗರಾಜ್ ಮೌರ್ಯ ಮಾತನಾಡಿ, ವಾರದ ಒಳಗಾಗಿ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಆನೇಕಲ್ ಸರ್ಕಾರಿ ಆಸ್ಪತ್ರೆ ಎದುರು ಹೋರಾಟ ನಡೆಸಲಾಗುವುದು ಎಂದರು.
ಹೋರಾಟಗಾರರಾದ ಬಳ್ಳೂರು ಗೋವಿಂದ್, ವಿಜಯ ಕುಮಾರಿ, ವಕೀಲ ಆನಂದ್ ಚಕ್ರವರ್ತಿ, ಅರೇಹಳ್ಳಿ ಅಶ್ವತ್ಥ್, ಕುಮಾರ್, ಹರೀಶ್ ಮತ್ತಿತರರು ಹಾಜರಿದ್ದರು.