ಕಾರ್ಗಲ್: ನಾಡಿಗೆ ಬೆಳಕು ನೀಡುವ ಜಲವಿದ್ಯುದಾಗಾರಗಳ ಪಾಲಿಗೆ ಜೀವ ಸೆಲೆಯಾಗಿರುವ ಲಿಂಗನಮಕ್ಕಿ ಜಲಾಶಯದ ನೀರಿನ ಸಂಗ್ರಹ ಬೆಡ್ಲೆವೆಲ್ (ಕ್ರಸ್ಟ್ ಮಟ್ಟ) 1795 ಅಡಿಯನ್ನು ತಲುಪಿದ್ದು, ಇದು ಜಲಾಶಯದ ಪಾಲಿಗೆ ಮಹತ್ತರ ಮೈಲುಗಲ್ಲು.
ಸಮುದ್ರ ಮಟ್ಟದಿಂದ ಗರಿಷ್ಠ 1819 ಅಡಿ ಎತ್ತರದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಲಿಂಗನಮಕ್ಕಿಯಲ್ಲಿ ಅಣೆಕಟ್ಟೆಯ ಕ್ರಸ್ಟ್ ಗೇಟಿನ ತಳಹದಿಯ ಮಟ್ಟಕ್ಕೆ ನೀರು ತಲುಪಿದಾಗ ಅದನ್ನು ಬೆಡ್ ಲೆವೆಲ್ ಎಂದು ಗುರುತಿಸಲಾಗುತ್ತದೆ. ಬೆಡ್ಲೆವೆಲ್ನಿಂದ ಕ್ರಸ್ಟ್ ಗೇಟ್ 24 ಅಡಿ ಎತ್ತರವನ್ನು ಹೊಂದಿದೆ. ಬೆಡ್ ಲೆವೆಲ್ ಮಟ್ಟಕ್ಕೆ ಜಲ ಸಂಗ್ರಹಗೊಂಡರೆ ಕೆಪಿಸಿ ಇಲಾಖಾಧಿಕಾರಿಗಳ ಒಂದು ಮಟ್ಟದ ಅಂದಾಜಿನ ಪ್ರಕಾರ ಒಂದು ವರ್ಷ ಪೂರ್ತಿ ಸಾಧಾರಣ ಮಟ್ಟದಲ್ಲಿ ಜಲವಿದ್ಯುದಾಗಾರಗಳನ್ನು ನಿರ್ವಹಣೆ ಮಾಡಿಕೊಂಡು ಹೋಗಲು ಸಾಧ್ಯ. ಹಾಗಾಗಿ 1795 ಅಡಿ ಮಟ್ಟವನ್ನು ಅಣೆಕಟ್ಟೆಯ ಪಾಲಿಗೆ ಮೈಲು ಗಲ್ಲು ಎನ್ನಲಾಗುತ್ತದೆ.
ಶರಾವತಿ ಜಲಾನಯನ ಪ್ರದೇಶಗಳಲ್ಲಿ ಮಳೆ ಮಾರುತ ಹೆಚ್ಚಾಗಿದ್ದು ಜಲಾಶಯದ ಒಳ ಹರಿವಿನಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯನ್ನು ಕಾಣುತ್ತಿದೆ. ಹಾಲಿ ಲಿಂಗನಮಕ್ಕಿ ಜಲಾಶಯದಲ್ಲಿ ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದಾಗ 4 ಅಡಿಗಳಷ್ಟು ಹೆಚ್ಚಿನ ನೀರು ಪ್ರಸಕ್ತ ಅಣೆಕಟ್ಟೆಯಲ್ಲಿ ಸಂಗ್ರಹವಾಗಿದೆ. ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆ ಕಳೆದ ಸಾಲಿನ ಮಳೆಗೆ ಹೋಲಿಸಿದಾಗ ಸುಮಾರು 620 ಮಿಮೀ ಹೆಚ್ಚು ಸುರಿದಿದೆ.