Oplus_131072 
ಜಿಲ್ಲೆ

ಬೆಟ್ಟಿಂಗ್ ದಂಧೆಯಲ್ಲಿ ಯುವಕರು ಸಿಲುಕದಿರಲಿ

ನಂಜನಗೂಡು: ತಾಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯುತ್ಸವ ಅಂಗವಾಗಿ ಭಾನುವಾರ ವಿಮೋಚನಾ ಯುವಕರ ಸಂಘದ ವತಿಯಿಂದ ಬುದ್ಧ, ಬಸವ ಅಂಬೇಡ್ಕರ್ ಕಪ್ ಸೀಸನ್-5 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಮಾಜಿ ಶಾಸಕ ಬಿ.ಹರ್ಷವರ್ಧನ್ ಚಾಲನೆ ನೀಡಿದರು.

ಯುವಕರಲ್ಲಿ ಬುದ್ಧನ ಆಶಯ, ಬಸವಣ್ಣನ ಆದರ್ಶ, ಅಂಬೇಡ್ಕರ್ ಅವರ ಸಿದ್ಧಾಂತ ಇರಬೇಕು. ಉರಿ ಬಿಸಿಲಿನಲ್ಲೂ ಕ್ರೀಡೆಯಲ್ಲಿ ಯುವಕರು ತೊಡಗಿದ್ದಾರೆ. ನಾನು ಕೂಡ ಕ್ರಿಕೆಟ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದೆ. ಹಳೆಯ ನೆನಪುಗಳು ನನಗೆ ಕಾಡುತ್ತಿದೆ. ನಮ್ಮ ಕಾಲದಲ್ಲಿ ಹೆಚ್ಚಾಗಿ ಕ್ರೀಡೆಗೆ ಪ್ರೋತ್ಸಾಹ ಸಿಗುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಬೆಟ್ಟಿಂಗ್ ದಂಧೆ ಹೆಚ್ಚಾಗಿ ನಡೆಯುತ್ತಿದೆ. ಈಗಾಗಲೇ ಐಪಿಎಲ್ ಶುರುವಾಗಿದೆ. ಬೆಟ್ಟಿಂಗ್ ದಂಧೆಯಲ್ಲಿ ಯುವಕರು ಸಿಲುಕಬಾರದು. ಕ್ರೀಡೆಗೆ ಮಾತ್ರ ಒತ್ತು ನೀಡಬೇಕು. ಕ್ರೀಡೆಯಲ್ಲಿ ಮಾತ್ರ ನಾವು ಸೋಲು ಗೆಲುವನ್ನು ಕಲಿಯಲು ಸಾಧ್ಯವಾಗುತ್ತದೆ. ಹಾಗಾಗಿ ಕ್ರೀಡಾಪಟುಗಳು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದು ಯುವಕರಿಗೆ ಸಲಹೆ ನೀಡಿದರು.

ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಮಾತನಾಡಿ, ಯುವಕರನ್ನು ಒಂದೆಡೆ ಸೇರಿಸಿ ಕ್ರೀಡೆಯನ್ನು ಆಯೋಜಿಸುವುದು ಅಷ್ಟು ಸುಲಭವಲ್ಲ. ಯುವಕರನ್ನು ಕ್ರೀಡೆಯ ಮೂಲಕ ಒಗ್ಗೂಡಿಸಲಾಗುತ್ತಿದೆ. ಇದರಿಂದ ದೈಹಿಕ, ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಚಿಕ್ಕರಂಗನಾಯಕ, ತಾಪಂ ಮಾಜಿ ಉಪಾಧ್ಯಕ್ಷ ಸಿ.ಎಂ.ಮಹದೇವಯ್ಯ, ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ, ಬಿಜೆಪಿ ಮುಖಂಡ ಕುಂಬರಹಳ್ಳಿ ಸುಬ್ಬಣ್ಣ, ಗ್ರಾಪಂ ಅಧ್ಯಕ್ಷ ಅವಿನಾಶ್, ಬಿಜೆಪಿ ವರುಣ ಗ್ರಾಮಾಂತರ ಮಂಡಲದ ಅಧ್ಯಕ್ಷ ನಗರ್ಲೆ ಮಹದೇವಸ್ವಾಮಿ, ಗ್ರಾಪಂ ಸದಸ್ಯರಾದ ಜಿ.ರವಿ ಕುಮಾರ್, ಡಿ.ಎಂ.ಮಹದೇವ್, ಭಾಗ್ಯಾ ಮಹೇಶ್, ರವಿನಾಯಕ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಮಹೇಶ್, ಮುಖಂಡರಾದ ನಾಗಯ್ಯ, ರಾಜಶೇಖರ್, ಮಹದೇವ, ಸುರೇಶ್, ಗ್ರಾಪಂ ಮಾಜಿ ಸದಸ್ಯ ಸುರೇಶ್, ದ್ವಿತೀಯ ದರ್ಜೆ ಗುತ್ತಿಗೆದಾರ ಪ್ರಮೋದ್ ಕುಮಾರ್, ಮಧು ಸಿಂಹ, ವಿಮೋಚನಾ ಯುವಕರ ಸಂಘದ ಅಧ್ಯಕ್ಷ ಚೇತನ್ ಆನಂದ್, ಗಟ್ಟವಾಡಿ ರಂಗಸ್ವಾಮಿ, ಸೋಮಯ್ಯ ಭಾಗವಹಿಸಿದ್ದರು.