ಜಿಲ್ಲೆ

ಬೆಟ್ಟಳ್ಳಿಯಲ್ಲಿ ಭಕ್ತಿಯ ಪರಾಕಾಷ್ಠೆ

ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆಯ ಅಂಗವಾಗಿ ಬುಧವಾರ ಹರಕೆ ಹೊತ್ತ 87 ಭಕ್ತರು ದೊಡ್ಡ ಬಾಯಿಬೀಗ ಹಾಕಿಸಿಕೊಂಡು ಭಕ್ತಿ ಪರಾಕಾಷ್ಠೆ ಮೆರೆದರು.

ಜಾತ್ರಾ ಮಹೋತ್ಸವದಲ್ಲಿ ಬಾಯಿಬೀಗ ಕಾರ್ಯಕ್ರಮ ಹೆಚ್ಚು ಹೆಸರುವಾಸಿ ಪಡೆದಿದ್ದು, ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ 15 ದಿನದ ಹಿಂದೆಯೇ ಹರಕೆ ಹೊತ್ತಿದ್ದ 87 ಭಕ್ತರು ಮಾಲೆ ಧರಿಸಿ ದಿನನಿತ್ಯ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದರು. ಬುಧವಾರ ಉಪವಾಸ ಕೈಗೊಂಡಿದ್ದು, ಮಧ್ಯಾಹ್ನ 2ರ ವೇಳೆಯಲ್ಲಿ ಪಟ್ಟಣದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ತಮಿಳುನಾಡಿನಿಂದ ಆಗಮಿಸಿದ ಅರ್ಚಕರಿಂದ ದೊಡ್ಡ ಬಾಯಿಬೀಗ ಹಾಕಿಸಿಕೊಂಡರು.

ವಿಜೃಂಭಣೆಯಿಂದ ಜರುಗಿದ ಬಾಯಿಬೀಗ:
ಬೆಳಗ್ಗೆ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಕಬ್ಬಿಣದ ಸಲಾಕೆಗಳಿಗೆ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ 2.15ರ ವೇಳೆಯಲ್ಲಿ ಆಂಜನೇಯ ಸ್ವಾಮಿ ದೇಗುಲದ ಬಳಿ ಬಾಯಿಬೀಗ ಹಾಕುವ ಅರ್ಚಕರು ಕಬ್ಬಿಣದ ಸಲಾಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಹರಕೆ ಹೊತ್ತಿದ್ದ ಭಕ್ತರಿಗೆ ಅರಿಶಿಣ ಮಿಶ್ರಿತ ನೀರನ್ನು ಮೈಮೇಲೆ ಸುರಿದು 20 ಅಡಿ ಉದ್ದದ ಸರಳಿನಿಂದ ಬಾಯಿಬೀಗ ಹಾಕಲಾಯಿತು. ಈ ವೇಳೆ ನೆರೆದಿದ್ದ ಭಕ್ತ ಸಮೂಹ ಕುತೂಹದಿಂದ ವೀಕ್ಷಿಸಿ ಕಣ್ತುಂಬಿಕೊಂಡರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಬಾಯಿಬೀಗವನ್ನು ಆಂಜನೇಯಸ್ವಾಮಿ ದೇವಾಲಯದ ಬಳಿ ಹಾಕಿಸಿಕೊಂಡರು. ಬಾಯಿಬೀಗವನ್ನು ಹಾಕಿಸಿಕೊಂಡ ಭಕ್ತರನ್ನು ವಾದ್ಯಮೇಳದೊಂದಿಗೆ ಆಂಜನೇಯಸ್ವಾಮಿ ದೇಗುಲದಿಂದ ಹಳೇ ಎಂಡಿಸಿಸಿ ರಸ್ತೆ ಹಾಗೂ ಪಟ್ಟಣದ ಬಸ್ ನಿಲ್ದಾಣದ ಮೂಲಕ ಬೆಟ್ಟಳ್ಳಿ ಮಾರಮ್ಮನ ದೇಗುಲಕ್ಕೆ ಕಾಲ್ನಡಿಗೆಯಲ್ಲಿ ಕರೆತರಲಾಯಿತು.

ಮಾಂಸದ ವ್ಯಾಪಾರ ಬಲು ಜೋರು:
ಜಾತ್ರೆಗೆ ಚಾಲನೆ ಕೊಟ್ಟ ದಿನದಿಂದ ಪಟ್ಟಣದಲ್ಲಿ ಮಾಂಸಾಹಾರ ನಿಷೇಧಿಸಲಾಗಿತ್ತು. ಹಾಗಾಗಿ ಹೋಟೆಲ್ ಸೇರಿದಂತೆ ಮಾಂಸದ ಅಂಗಡಿಗಳು ಬಂದ್ ಆಗಿದ್ದವು. ಆದರೆ, ಬುಧವಾರ ಪಟ್ಟಣದ ಪ್ರತಿ ಮನೆಯಲ್ಲೂ ಬಾಡೂಟದ ಹಿನ್ನೆಲೆಯಲ್ಲಿ ಜನರು ಮಾಂಸದ ಅಂಗಡಿಗಳಿಗೆ ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಹರಿದು ಬಂದ ಜನಸಾಗರ:
ಕೋವಿಡ್ ಹಿನ್ನ್ನೆಲೆಯಲ್ಲಿ ಕಳೆದ 2 ವರ್ಷದಿಂದ ಜಾತ್ರೆಯನ್ನು ಸಾಂಪ್ರದಾಯಿಕ ಹಾಗೂ ಸರಳವಾಗಿ ಆಚರಿಸಲಾಗಿತ್ತು. ಇದರಿಂದ ನೆರೆಹೊರೆಯ ಭಕ್ತರು ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಬುಧವಾರ ಬಾಯಿಬೀಗ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂತು. ಪಟ್ಟಣದ ಎಲ್ಲೆಂದರಲ್ಲಿ ಜನವೋ ಜನ! ಆಗಮಿಸಿದ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಧೂಪ ಹಾಕಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗ ಉಪ್ಪು ಸುರಿದು ದೇವಿ ಕೃಪೆಗೆ ಪಾತ್ರರಾದರು. ದೇವಿಗೆ ನಗದು ಕಾಣಿಕೆ, ದವಸ ಧಾನ್ಯ, ಚಿನ್ನ, ಬೆಳ್ಳಿ, ಸೀರೆ ನೀಡುವುದರ ಮೂಲಕ ಹರಕೆ ಕಾಣಿಕೆಗಳನ್ನು ಸಲ್ಲಿಸಿದರು. ದೇಗುಲದ ಸೇವಾ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಬಸ್ಸಿಗಾಗಿ ಪರದಾಟ:
ದೊಡ್ಡ ಬಾಯಿಬೀಗ ಕಾರ್ಯಕ್ರಮ ಮುಗಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಊರುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದರು. ಆದರೆ, ಬಸ್ಸಿನ ಕೊರತೆ ಎದುರಾದ ಪರಿಣಾಮ ತೊಂದರೆ ಪಡಬೇಕಾಯಿತು. ಇದರಿಂದಾಗಿ ಕೆಲವರು ಆಟೋಗಳ ಮೂಲಕ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು. ಇನ್ನು ಕೆಲವರು ಆಗಮಿಸಿದ ಬಸ್ಸಿನಲ್ಲಿ ನೂಕುನುಗ್ಗಲಲ್ಲೇ ಪ್ರಯಾಣ ಬೆಳೆಸಿದರು.