ಜಿಲ್ಲೆ

ಬೆಟ್ಟಳ್ಳಿ ಮಾರಮ್ಮನಿಗೆ ಬೆಣ್ಣೆ ಅಲಂಕಾರ

ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಕೊನೆಯ ಆಷಾಢ ಶುಕ್ರವಾರದ ಅಂಗವಾಗಿ ದೇವಿಯ ಮೂರ್ತಿಯನ್ನು ಬೆಣ್ಣೆಯಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮುಂಜಾನೆ 5 ಗಂಟೆಯಲ್ಲಿ ದೇವಿಯ ಮೂರ್ತಿಗೆ ಪನ್ನೀರು, ಎಳನೀರು, ಅರಿಶಿಣ, ಕುಂಕುಮ, ಜೇನುತುಪ್ಪ, ಹಾಲು, ಮೊಸರು ಹಾಗೂ ಗಂಧದಿಂದ ಅಭಿಷೇಕ ನೆರವೇರಿಸಲಾಯಿತು. ಬಳಿಕ ಬೆಣ್ಣೆ ಅಲಂಕಾರ ಮಾಡಿ ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಪಂಚಾಮೃತ ಅಭಿಷೇಕ ಅರ್ಪಿಸಿ ಧೂಪ, ದೀಪಧಾರತಿ, ಕೊಬ್ಬರಿ, ಬೆಲ್ಲ, ನಿಂಬೆಹಣ್ಣಿನ ಆರತಿ ಹಾಗೂ ಮಹಾ ಮಂಗಳಾರತಿ ಬೆಳಗಿಸಲಾಯಿತು.
ಪಟ್ಟಣ ಸೇರಿದಂತೆ ಭೈರನತ್ತ, ಉದ್ದನೂರು, ಮಾಲಾಪುರ, ಅಜ್ಜೀಪುರ, ಚಿಂಚಳ್ಳಿ, ಮಣಗಳ್ಳಿ, ಮಂಗಲ ಸಹಿತ ಇನ್ನಿತರ ಕಡೆಗಳಿಂದ ಆಗಮಿಸಿದ್ದ ಭಕ್ತರು ದೇವಿಯ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗದಲ್ಲಿ ಉಪ್ಪು ಸುರಿದು ದೇವಿ ಕೃಪೆಗೆ ಪಾತ್ರರಾದರು. ಅರ್ಚಕ ಜಯಂತ್‌ರಾವ್ ಸಿಂಧೆ ಅವರು ಪೂಜಾ ಕೈಂಕರ್ಯ ನೆರವೇರಿಸಿದರು.