ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಹೊಸಕೋಟೆ ತಾಲೂಕು ನಗರೀಕರಣದತ್ತ ವೇಗವಾಗಿ ಮುನ್ನುಗ್ಗುತ್ತಿದೆ, ಸೆಟಲೈಟ್ ಟೌನ್ ಆಗುವ ಕನಸೂ ಹೊತ್ತಿದೆ. ಆದರೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳು ಅವ್ಯವಸ್ಥೆಗಳ ಚಿತ್ರಣಗಳನ್ನು ಬಿತ್ತರಿಸುತ್ತಿವೆ.
ಹೊಸಕೋಟೆ ತಾಲೂಕಿನಲ್ಲಿ ದೊಡ್ಡ ಹೋಬಳಿಯೆಂದೇ ಗುರುತಿಸಿಕೊಂಡಿರುವ ಸೂಲಿಬೆಲೆ ಹೋಬಳಿ ವ್ಯಾಪ್ತಿಯ ಬೆಟ್ಟಳ್ಳಿ ಹಾಗೂ ಗಿಡ್ಡಪ್ಪನಹಳ್ಳಿ ಗ್ರಾಮಗಳ ಸಂಪರ್ಕ ಕೊಂಡಿಯಾಗಿರುವ ಪ್ರಮುಖ ರಸ್ತೆ ಅಭಿವೃದ್ಧಿ ಈ ಹಿಂದಿನಿಂದಲೂ ಕಡೆಗಣಿಸಲ್ಪಟ್ಟಿದೆ. ದಶಕಗಳ ಹಿಂದೆ ಕಂಡ ಡಾಂಬರು ಕಿತ್ತು ಬಂದು ರಸ್ತೆಯುದ್ದಕ್ಕೂ ಮಂಡಿಯುದ್ದದ ಹಳ್ಳಗಳು ನಿರ್ಮಾಣವಾಗಿವೆ, ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ತುಂಬಿಕೊಂಡು ಸಣ್ಣ ಸಣ್ಣ ಕೆರೆಗಳ ರೂಪ ಪಡೆಯುತ್ತದೆ. ಪ್ರತಿನಿತ್ಯ ರೈತರು ಕೃಷಿ ಚಟುವಟಿಕೆ ಸೇರಿ ಇನ್ನಿತರ ಕೆಲಸ ಕಾರ್ಯಗಳಿಗೆ ಈ ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದೆ.
ಗುಂಡಿ ಮುಚ್ಚಲೂ ಆಗಲಿಲ್ಲವೇ? ರಸ್ತೆಗೆ ಹಾಕಿರುವ ಡಾಂಬರು ಕಿತ್ತು ಬಂದಿದೆ, ಜಲ್ಲಿಕಲ್ಲುಗಳು ಮೇಲೆದ್ದು ರಸ್ತೆಯ ಎರಡೂ ಬದಿಗಳಲ್ಲಿ ಸೇರಿಕೊಳ್ಳುತ್ತಿವೆ, ಡಾಂಬರು ಕೆಳಗಿನ ಮಣ್ಣು ಮೇಲೆದ್ದು ಡಾಂಬರೀಕರಣದ ಕುರುಹನ್ನೂ ಮಾಯಮಾಡುತ್ತಿದೆ. ಆದರೆ ಇದರ ಅಭಿವೃದ್ಧಿ ಇರಲಿ ಕನಿಷ್ಟ ರಸ್ತೆ ಗುಂಡಿ ಮುಚ್ಚಲೂ ಸಾಧ್ಯವಾಗಿಲ್ಲವೇ ಎಂಬುದು ಗ್ರಾಮಸ್ಥರ ಆಕ್ರೋಶವಾಗಿದೆ.
ಅನುದಾನ ಕೊರತೆ! ರಸ್ತೆ ಅಭಿವೃದ್ಧಿ ಸೇರಿ ಇನ್ನಿತರ ಮೂಲಸೌಕರ್ಯಗಳಿಗೆ ಅನುದಾನ ಕೊರತೆ ಎಂಬ ಸಿದ್ದ ಉತ್ತರ ಸ್ಥಳೀಯ ಅಧಿಕಾರಿಗಳಿಂದಲೇ ಕೇಳಿಬರುತ್ತಲೇ ಇದೆ, ಪಂಚಾಯಿತಿ ಸಿಬ್ಬಂದಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಅನುದಾನದ ಕೊರತೆ ಎಂಬುದಾಗಿ ತೋರುಬೆರಳು ತೋರಿಸುತ್ತಿದ್ದಾರೆ. ಅನುದಾನ ಕೊರತೆ ಎಂಬ ಉತ್ತರದಿಂದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅಪಾಯಕಾರಿ ಸೇತುವೆ: ಬೆಟ್ಟಳ್ಳಿ ಹಾಗೂ ಗಿಡ್ಡಪ್ಪನಹಳ್ಳಿ ಗ್ರಾಮಗಳ ನಡುವೆ ಹಾದು ಹೋಗಿರುವ ಸೇತುವೆ ಶಿಥಿಲಗೊಂಡಿದೆ, ಸೇತುವೆ ತಡೆಗೋಡೆಯಲ್ಲಿನ ಕಲ್ಲುಗಳು ಉದುರಿಹೋಗಿವೆ, ದೊಡ್ಡ ಕಂದಕವಾಗಿ ಮಾರ್ಪಾಟಾಗಿದ್ದು, ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತಕ್ಕೆ ಆಹ್ವಾನ ನೀಡುವಂತಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬೆಟ್ಟಳ್ಳಿ ಹಾಗೂ ಗಿಡ್ಡಪ್ಪನಹಳ್ಳಿ ಗ್ರಾಮಗಳ ನಡುವೆ ಸಾಗುವ ರಸ್ತೆ ಅಭಿವೃದ್ಧಿಗೆ ಈಗಾಗಲೇ ಕ್ರಿಯಾಯೋಜನೆ ತಯಾರಿಸಿ ಅನುಮೋದನೆಗಾಗಿ ಕಳುಹಿಸಲಾಗಿದೆ ಅದರೆ ಅನುದಾನದ ಕೊರತೆಯಿಂದ ವಿಳಂಬವಾಗಿದೆ, ಅನುದಾನ ಬಂದರೆ ತಕ್ಷಣವೇ ಕ್ರಮಕ್ಕೆ ಮುಂದಾಗಲಾಗುವುದು.
ಮೇಘನಾ, ಕಿರಿಯ ಅಭಿಯಂತರರು ಗ್ರಾಮೀಣಾಭಿವೃದ್ಧಿ ಇಲಾಖೆ