ತಾಳುಬೆಟ್ಟದ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ಹಳ್ಳಕ್ಕೆ ನುಗಿರುವುದು. 
ಜಿಲ್ಲೆ

ಬೆಟ್ಟದಲ್ಲಿ ಅಪಘಾತದಿಂದ ಸಾವು, ನೋವು ಹೆಚ್ಚಳ

ಹನೂರು: ತಾಲೂಕಿನಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಇತ್ತೀಚೆಗೆ ಅಪಘಾತಗಳು ಹೆಚ್ಚಾಗುತ್ತಿದ್ದು, ಸಾವು-ನೋವು ಸಂಭವಿಸುತ್ತಿವೆ. ಇದರಿಂದ ಈ ಮಾರ್ಗದ ಅಪಘಾತ ವಲಯಗಳಲ್ಲಿ ಸೂಚನಾಫಲಕ ಅನಿವಾರ್ಯವಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿದೆ.

ಮ.ಬೆಟ್ಟ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದ್ದು, ಇಲ್ಲಿಗೆ ಜಾತ್ರಾ ಸಂದರ್ಭ, ಅಮಾವಾಸ್ಯೆ ಹಾಗೂ ಇತರ ವಿಶೇಷ ದಿನಗಳಲ್ಲಿ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ದೇವರ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳು ಸಿದ್ಧಿಯಾಗಲಿ ಎಂದು ಪೂಜೆ ಸಲ್ಲಿಸಿ ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಮಾರ್ಗದಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ. ಇದರಿಂದ ಊರಿಗೆ ಹಿಂದಿರುಗುವ ವೇಳೆ ಅಪಘಾತದಿಂದ ಸಾವು-ನೋವು ಉಂಟಾಗುತ್ತಿದ್ದು, ಭಕ್ತರ ಪ್ರಾಣಕ್ಕೆ ಸಂಚಕಾರ ತರುತ್ತಿದೆ.

ದೀಪಾವಳಿ ಜಾತ್ರೆ ವೇಳೆ ತಾಳುಬೆಟ್ಟದ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್ ಹಳ್ಳಕ್ಕೆ ನುಗ್ಗಿ ಸುಮಾರು 25 ಜನ ಗಾಯಗೊಂಡಿದ್ದರು. ಅಲ್ಲದೆ ಬಸ್ ರಸ್ತೆ ಬದಿಗೆ ಮಗುಚಿ ಬಿದ್ದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. 15 ದಿನಗಳ ಅವಧಿಯಲ್ಲಿ ಮಂಗಲ ಗ್ರಾಮದ ಬಳಿ 3 ಅಪಘಾತಗಳು ಸಂಭವಿಸಿದ್ದು, ಮೈಸೂರಿನ ತನ್ಮಯಿ (3), ಧಾರವಾಡದ ಶ್ರೀಶೈಲ್ ಮೇಟಿ ಮೃತಪಟ್ಟಿದ್ದರಲ್ಲದೆ, ಭದ್ರಯ್ಯನಹಳ್ಳಿಯ ಮೂವರು ಹಾಗೂ ಮೈಸೂರಿನ 6 ಜನರು ಗಾಯಗೊಂಡಿದ್ದರು. ಇತ್ತ ಸಿಮೆಂಟ್ ಲಾರಿಯೊಂದು ಕೌದಳ್ಳಿ ಗ್ರಾಮದ ಬಳಿ ಮಗುಚಿ ಬಿದ್ದಿದ್ದು, ಇದೇ ಗ್ರಾಮದ ಬಳಿ ಮ.ಬೆಟ್ಟದಿಂದ ಆಗಮಿಸುತ್ತಿದ್ದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಇದರ ಜತೆಗೆ ಈ ಮಾರ್ಗದಲ್ಲಿ ಕೆಲವು ಕಡೆಗಳಲ್ಲಿ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ಆಗಾಗ್ಗೆ ಜರುಗುತ್ತಲೇ ಇವೆ.

ಈ ಮಾರ್ಗದಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತಿರುವ ಸ್ಥಳಗಳು, ತಿರುವುಗಳಲ್ಲಿ ಪೊಲೀಸ್ ಇಲಾಖೆ ಮುನ್ಸೂಚನಾ ಫಲಕ ಹಾಗೂ ವೇಗ ಮಿತಿ ಸೂಚನಾಫಲಕ ಅಳವಡಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇದರಿಂದ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ. ಈ ಬಗ್ಗೆ ಸಾರ್ವಜನಿಕರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೋಗಬಾರದೆೆಂಬ ಭಾವನೆ ಬರುತ್ತದೆ
ಮ.ಬೆಟ್ಟವು ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಒಳಿತು ಉಂಟು ಮಾಡು ಎಂದು ದೇವರಿಗೆ ಪೂಜೆ ಸಲ್ಲಿಸಿ ಹಿಂದಿರುಗುತ್ತಾರೆ. ಆದರೆ ಹನೂರು ಮಾರ್ಗದಲ್ಲಿ ಇತ್ತೀಚೆಗೆ ಅಪಘಾತಗಳು ಹೆಚ್ಚಾಗುತ್ತಿದ್ದು, ಇದರಿಂದ ಅಪಘಾತಕ್ಕೀಡಾದ ಕುಟುಂಬ ಮ.ಬೆಟ್ಟಕ್ಕೆ ಹೋಗಬಾರದೆೆಂಬ ಭಾವನೆಯನ್ನು ಹೊಂದುತ್ತಾರೆ. ಆದ್ದರಿಂದ ಈ ಮಾರ್ಗದಲ್ಲಿ ಅಪಘಾತ ಕಡಿವಾಣಕ್ಕೆ ಸೂಚನಾ ಅಳವಡಿಸಬೇಕಿದೆ.
> ಮಾದೇಶ್, ಹನೂರು ನಿವಾಸಿ

ಮುನ್ನೆಚ್ಚರಿಕೆಯಿಂದ ತೆರಳಲು ಅನುಕೂಲ
15 ದಿನಗಳ ಅವಧಿಯಲ್ಲಿ ಮಂಗಲ ಗ್ರಾಮದ ಘೋರಿಕೆರೆ ಆಸುಪಾಸಲಿನಲ್ಲಿ 3 ಅಪಘಾತಗಳು ಸಂಭವಿಸಿದ್ದು, ಇಬ್ಬರು ಮೃತಪಟ್ಟು 9 ಜನರು ಗಾಯಗೊಂಡಿದ್ದಾರೆ. ಆಗಾಗ್ಗೆ ಈ ಸ್ಥಳದಲ್ಲಿ ಅಪಘಾತಗಳು ಸಂಭವಿಸಿ ಸಾವು-ನೋವು ಸಂಭವಿಸುತ್ತಿದೆ. ಆದ್ದರಿಂದ ಈ ಸ್ಥಳದಲ್ಲಿ ಸೂಚನಾ ಫಲಕ ಅಳವಡಿಸಿದರೆ ವಾಹನ ಸವಾರರು ಮುನ್ನೆಚ್ಚರಿಕೆಯಿಂದ ತೆರಳಲು ಸಹಾಯಕವಾಗುತ್ತದೆ. ಇದರಿಂದ ಅಪಘಾತವನ್ನೂ ತಡೆಗಟ್ಟಬಹುದು.
> ಮಾದೇಶ್, ಗುಂಡಾಪುರ ಗ್ರಾಮಸ್ಥ

ಕಟ್ಟುನಿಟ್ಟಾಗಿ ನಿಯಮ ಜಾರಿಗೆ ಬರಲಿ
ರಾಜ್ಯದ ವಿವಿಧೆಡೆಯಿಂದ ಭಕ್ತರು ವಾಹನಗಳ ಮೂಲಕ ಮ.ಬೆಟ್ಟಕ್ಕೆ ಆಗಮಿಸುತ್ತಾರೆ. ಆದರೆ ಕೆಲ ಚಾಲಕರಿಗೆ ಈ ಮಾರ್ಗದ ಬಗ್ಗೆ ತಿಳಿದಿರುವುದಿಲ್ಲ. ಇದರಿಂದ ಈ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತಿದ್ದು, ಅಂತಹವರ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತಿವೆ. ಆದ್ದರಿಂದ ಪೊಲೀಸ್ ಇಲಾಖೆ ಅಪಘಾತಗಳನ್ನು ತಡೆಗಟ್ಟುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಇದರಿಂದ ಮ.ಬೆಟ್ಟಕ್ಕೆ ಬರುವ ಭಕ್ತರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ.
>ರೇಖಾ, ಹನೂರು

ವಾಹನ ಸವಾರರಲ್ಲಿ ಹೆಚ್ಚಿದ ಭಯ
ಹನೂರಿನಿಂದ ಮ.ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಅಪಘಾತಗಳು ಸಂಭವಿಸುತ್ತಿರುವುದರಿಂದ ವಾಹನ ಸವಾರರಲ್ಲಿ ಭಯಭೀತಿ ಆವರಿಸಿದೆ. ಹಾಗಾಗಿ ಈ ಮಾರ್ಗದ ತಿರುವುಗಳು, ಅಪಘಾತ ಸಂಭವಿಸಬಹುದಾದ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ಸಂಬಂಧಿಸಿದ ಸೂಚನಾ ಫಲಕಗಳನ್ನು ಅಳವಡಿಸಬೇಕು. ಇದರಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಬಹುದಾಗಿದೆ.
> ಕುಮಾರ್, ಬೆಳತ್ತೂರು ಗ್ರಾಮಸ್ಥ

ವೇಗಕ್ಕೆ ಕಡಿವಾಣ ಹಾಕಲಿ
ಮ.ಬೆಟ್ಟದ ಮಾರ್ಗದ ಕೆಲವು ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ತಾಳುಬೆಟ್ಟದಿಂದ ಮ.ಬೆಟ್ಟದ ಮಾರ್ಗದ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಕೊರಕಲು ನಿರ್ಮಾಣವಾಗಿದೆ. ಮೊದಲನೆಯದಾಗಿ ರಸ್ತೆ ಅಭಿವೃದ್ಧಿಯಾಬೇಕು. ಜತೆಗೆ ಅತಿ ವೇಗವೇ ಅಪಘಾತಕ್ಕೆ ಕಾರಣವಾಗಿದೆ. ಹಾಗಾಗಿ, ಇದಕ್ಕೆ ಕಡಿವಾಣ ಹಾಕಬೇಕಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಬೇಕು.
> ಶಿವಕುಮಾರಸ್ವಾಮಿ, ಅಧ್ಯಕ್ಷ ಸರ್ವೋದಯ ಜನಜಾಗೃತಿ ವೇದಿಕೆ ಹನೂರು

ಅರಿವು ಮೂಡಿಸುವ ಕೆಲಸವಾಗಲಿ
ಜಾತ್ರೆ, ಅಮಾವಾಸ್ಯೆ ಹಾಗೂ ವಿಶೇಷ ದಿನಗಳಲ್ಲಿ ಈ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಈ ಸಂದರ್ಭಗಳಲ್ಲಿ ಚಾಲಕರ ಅತಿವೇಗ ಅಪಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈ ವೇಳೆ ಸಂಚಾರಿ ನಿಯಮದ ಬಗ್ಗೆ ಚಾಲಕರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು.
>ಸುನೀಲ್, ವಾಹನ ಚಾಲಕ ಹನೂರು

ಅಭಿವೃದ್ಧಿ ಪ್ರಾಧಿಕಾರ ಸಿಬ್ಬಂದಿ ನಿಯೋಜಿಸಲಿ
ಅಪಘಾತಗಳು ಸಂಭವಿಸುತ್ತಿರುವುದರಿಂದ ಅಪಘಾತಕ್ಕೀಡಾದ ಕುಟುಂಬ ಮ.ಬೆಟ್ಟದ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಹೊಂದುತ್ತಿದ್ದಾರೆ. ಅದ್ದರಿಂದ ಅಪಘಾತಗಳನ್ನು ತಡೆಗಟ್ಟುವ ದೃಷ್ಟಿಯಿಂದ ಜಾತ್ರಾ ವೇಳೆ ಮ.ಬೆಟ್ಟದಿಂದ ತಾಳುಬೆಟ್ಟದವರೆಗಿನ ಅಪಘಾತ ಸಂಭವಿಸುವ ತಿರುವುಗಳಲ್ಲಿ ಅಭಿವೃದ್ಧಿ ಪ್ರಾಧಿಕಾರ ಸಿಬ್ಬಂದಿಯನ್ನು ನಿಯೋಜಿಸಬೇಕು. ಹನೂರಿನಿಂದ ಮ.ಬೆಟ್ಟಕ್ಕೆ ಆಗಮಿಸುವ ಮಾರ್ಗದ ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಬೇಕು.
> ಚಂಗಡಿ ಕರಿಯಪ್ಪ, ಅಧ್ಯಕ್ಷ, ರೈತ ಸಂಘ ಮತ್ತು ಹಸಿರು ಸೇನೆ ಹನೂರು

ಸುಗಮ ಸಂಚಾರಕ್ಕೆ ಒತ್ತು ನೀಡಲಿ
ಒಂದು ತಿಂಗಳಿನಿಂದ ಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಭಕ್ತರಲ್ಲಿ ಆತಂಕ ಎದುರಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಸೂಚನಾ ಫಲಕವನ್ನು ಅಳವಡಿಸಬೇಕು. ಇದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದ್ದು, ಅಪಘಾತಗಳನ್ನು ತಡೆಗಟ್ಟಬಹುದಾಗಿದೆ.
>ಮಲ್ಲೇಶ್, ಶಾಗ್ಯ ಗ್ರಾಮ

ಜನರಿಗೆ ತೊಂದರೆ ಆಗದಿರಲಿ
ಮ.ಬೆಟ್ಟ ಮಾದಪ್ಪನ ಪುಣ್ಯ ಕ್ಷೇತ್ರ. ಹಾಗಾಗಿ ಇಲ್ಲಿಗೆ ಅಗಮಿಸುವ ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು. ಆದರೆ, ಇತ್ತಿಚೀನ ದಿನಗಳಲ್ಲಿ ಅಪಘಾತಗಳು ಸಂಭವಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ. ಅದ್ದರಿಂದ ಪೊಲೀಸ್ ಇಲಾಖೆ ಅಪಘಾತಗಳು ಸಂಭವಿಸದಂತೆ ಅಗತ್ಯ ಕ್ರಮಕೈಗೊಳ್ಳಬೇಕು.
> ನಾಗೇಂದ್ರ, ಕಣ್ಣೂರು ಗ್ರಾಮ

ಸೂಚನಾ ಫಲಕ ಅಳವಡಿಕೆಗೆ ಕ್ರಮ
ಮಲೆಮಹದೇಶ್ವರ ಬೆಟ್ಟ ಮಾರ್ಗದಲ್ಲಿ ಎಲ್ಲೆಲ್ಲಿ ಅಪಘಾತಗಳು ಸಂಭವಿಸಿದೆಯೋ ಆ ಸ್ಥಳಗಳನ್ನು ಸರ್ವೇ ಕಾರ್ಯ ನಡೆಸಿ ಸೂಚನಾ ಫಲಕಗಳನ್ನು ಅಳವಡಿಸಲು ಅಗತ್ಯ ಕ್ರಮವಹಿಸಲಾಗುವುದು. > ಸೋಮೇಗೌಡ, ಡಿವೈಎಸ್ಪಿ, ಕೊಳ್ಳೇಗಾಲ ಉಪ ವಿಭಾಗ.