ಬೆಟ್ಟದಪುರ: ಕರೊನಾ ಸಂಕಷ್ಟದ ಬಳಿಕ ಬೆಟ್ಟದಪುರ ವ್ಯಾಪ್ತಿಯಲ್ಲಿ ಅದ್ದೂರಿಯಾಗಿ ದೀಪಾವಳಿ ದೀವಟಿಗೆ ಉತ್ಸವ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಹಬ್ಬದ ವ್ಯಾಪಾರ ಜೋರಾಗಿ ನಡೆಯಿತು. ಬೆಟ್ಟದಪುರ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಗೊರಹಳ್ಳಿ, ಚಪ್ಪರದಹಳ್ಳಿ, ಅಂಬಲಾರೆ, ಹಾರನಹಳ್ಳಿ, ಚಿಕ್ಕನೇರಳೆ, ಹಸುವಿನಕಾವಲು, ಈಚೂರು, ಬಾರಸೆ, ಬೆಟ್ಟದತುಂಗ, ಅತ್ತಿಗೋಡು, ಸಂಗರಶೆಟ್ಟಹಳ್ಳಿ, ಕೆಳಗಿನಕೊಪ್ಪಲು, ಬಿ.ಟಿ ಕೊಪ್ಪಲು, ಕೊಣಸೂರು ಸೇರಿದಂತೆ ವಿವಿಧ ಗ್ರಾಮಗಳಿಂದ ಜನರು ಆಗಮಿಸಿ ಹಬ್ಬದ ಸಂಭ್ರಮಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಈ ಬಾರಿ ಕರೊನಾ ಬಳಿಕ ವ್ಯಾಪಾರ ವಹಿವಾಟು ಸ್ವಲ್ಪ ಚೇತರಿಕೆ ಕಂಡಿದ್ದರೂ, ವಸ್ತುಗಳ ಬೆಲೆ ಮಾತ್ರ ಗಗನಕ್ಕೇರಿದೆ. ಬೆಲೆ ಏರಿಕೆ ನಡುವೆಯೂ ಹಬ್ಬದ ಸಂಭ್ರಮಕ್ಕಾಗಿ ವಿವಿಧ ಬಗೆಯ ಹೂವು, ಹಣ್ಣು, ತೆಂಗಿನ ಕಾಯಿ, ಮಣ್ಣಿನಿಂದ ಮಾಡಿದ ದೀಪಗಳನ್ನು ಗ್ರಾಹಕರು ಖರೀದಿಸಿದರು.