ಬೆಟ್ಟದಪುರ ಬೆಟ್ಟದ ಶ್ರೀ ಆಂಜನೇಯಸ್ವಾಮಿ ಸೇವಾ ಸಮಿತಿಯಿಂದ ಆಯೋಜಿಸಿದ್ದ ಹನುಮಂತ್ಯುತ್ಸವದ ಮೆರವಣಿಗೆ ಸಂಭ್ರಮದಿಂದ ಸಾಗಿತು. 
ಜಿಲ್ಲೆ

ಬೆಟ್ಟದಪುರದಲ್ಲಿ ಹನುಮಂತ್ಯುತ್ಸವ ಸಂಭ್ರಮ

ಬೆಟ್ಟದಪುರ: ಬೆಟ್ಟದ ಶ್ರೀ ಆಂಜನೇಯಸ್ವಾಮಿ ಸೇವಾ ಸಮಿತಿಯಿಂದ ಸೋಮವಾರ 7ನೇ ವರ್ಷದ ಹನುಮಂತ್ಯುತ್ಸವ ವಿಜೃಂಭಣೆಯಿಂದ ಜರುಗಿತು.

ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟದ ಬುಡದ ಉತ್ತರ ದಿಕ್ಕಿನಲ್ಲಿರುವ ಏಣಿ ಹನುಮಂತ ಎಂದೇ ಪ್ರಸಿದ್ಧಿ ಪಡೆದಿರುವ ವೀರಾಂಜನೇಯ ಸ್ವಾಮಿ ಗುಡಿಯಲ್ಲಿ ಹನುಮಂತ್ಯುತ್ಸವದ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.

ಆಂಜನೇಯ ಸ್ವಾಮಿ ಮೂರ್ತಿಗೆ ಅಲಂಕಾರ ಮಾಡಿ ತೆರೆದ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಹನುಮನ ಚಿತ್ರವಿರುವ ಕೇಸರಿ ಬಾವುಟಗಳು ರಾರಾಜಿಸಿದವು. ತಳಿರು-ತೋರಣ ಕಟ್ಟಲಾಗಿತ್ತು.

ದೇವಸ್ಥಾನಕ್ಕೆ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಪರಿಸರ ಹೋರಾಟಗಾರ ಕೌಲನಹಳ್ಳಿ ಸೋಮಶೇಖರ್ ಮತ್ತಿತರರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಹನುಮಂತ್ಯುತ್ಸವ ಅಂಗವಾಗಿ ಭಾನುವಾರ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.15ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ನೀಡಲಾಯಿತು.