ಮಡಿಕೇರಿ: ನಗರ, ಪಟ್ಟಣ, ಗ್ರಾಮಗಳ ನೈರ್ಮಲ್ಯಕ್ಕೆ ಸರ್ಕಾರ, ಸ್ಥಳೀಯ ಸಂಸ್ಥೆಗಳು ಎಷ್ಟೇ ಕಾರ್ಯಕ್ರಮಗಳನ್ನು ಹಾಕಿಕೊಂಡರೂ ಕಸದ ಸಮಸ್ಯೆಗೆ ಮಾತ್ರ ಸಂಪೂರ್ಣ ಮುಕ್ತಿ ನೀಡಲು ಸಾಧ್ಯವಾಗಿಲ್ಲ. ಎಲೆಡೆಯಂತೆ ಕಸ ವಿಲೇವಾರಿ ಸಮಸ್ಯೆ ಕೊಡಗಿನಲ್ಲೂ ಇದ್ದು, ಕೆಲ ಭಾಗಗಳಲ್ಲಂತೂ ಇದಕ್ಕೆ ಪರಿಹಾರವೇ ಇಲ್ಲದಂತಾಗಿದೆ.
ತನ್ನ ಪ್ರಾಕೃತಿಕ ಸೌಂದರ್ಯದಿಂದ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಮಂಜಿನ ನಗರಿ ಮಡಿಕೇರಿ ಕಸದ ಸಮಸ್ಯೆಯಿಂದ ತನ್ನ ಸೌಂದರ್ಯಕ್ಕೆ ಚ್ಯುತಿ ತಂದುಕೊಳ್ಳುತ್ತಿದೆ. ಸುಂದರ ಬೆಟ್ಟಸಾಲುಗಳ ನಡುವೇ ಇರುವ ಬೆಟ್ಟದ ಮೇಲೆ ತ್ಯಾಜ್ಯ ವಿಲೇವಾರಿ ಘಟಕವಿದ್ದು, ಇಡೀ ನಗರಕ್ಕೇ ಇದು ಕಪ್ಪು ಚುಕ್ಕೆಯಂತಿದೆ. ಇಡೀ ನಗರದ ರಾಶಿ ರಾಶಿ ಕಸವನ್ನು ಬೆಟ್ಟದ ಮೇಲೆ ಸುರಿಯಲಾಗುತ್ತಿದ್ದು, ಅಲ್ಲಿ ಅದರ ಸರಿಯಾದ ಸಂಸ್ಕರಣೆಯಾಗದೇ ಇಡೀ ನಗರಕ್ಕೆ ಸಾಂಕ್ರಾಮಿಕಗಳನ್ನು ಹರಡುತ್ತಿದೆ.
ಬೆಟ್ಟದ ಮೇಲೆ ಕಸದ ರಾಶಿ: ನಗರದ ಸ್ಟೋನ್ ಹಿಲ್ ಸಮೀಪದ ಬೆಟ್ಟದ ಮೇಲೆ ಮಡಿಕೇರಿ ನಗರದ ಕಸವನ್ನು ಸುರಿಯಲಾಗುತ್ತಿದೆ. ವರ್ಷಾನುಗಟ್ಟಲೆ ಸುರಿದ ಕಸದಿಂದ ಆ ಪ್ರದೇಶವೀಗ ಸಂಪೂರ್ಣ ತುಂಬಿದ್ದು, ಸುತ್ತ ಮುತ್ತಲ ಬಡಾವಣೆ ನಿವಾಸಿಗಳು ದುರ್ವಾಸನೆ, ನೊಣಗಳ ಕಾಟ, ಸಾಂಕ್ರಾಮಿಕ ರೋಗಗಳ ಆತಂಕದಿಂದ ತತ್ತರಿಸಿ ಹೋಗಿದ್ದಾರೆ. ಸರಿಯಾಗಿ ತ್ಯಾಜ್ಯ ನಿರ್ವಹಣೆ ಮಾಡದಿರುವುದರಿಂದ ಈ ಭಾಗದಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿದೆ.
ಪ್ರತಿದಿನ ಕಸ ಸಂಗ್ರಹಕ್ಕೆ ಬರುವ ವಾಹನಗಳಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಕೊಡಿ ಎಂಬ ಸಂದೇಶ ನಿರಂತರವಾಗಿ ಸಾರಲಾಗುತ್ತಿದೆ. ನಗರಸಭೆಯಿಂದ ಹಸಿ ಕಸ ಸಂಗ್ರಹಕ್ಕೆಂದು ಮನೆ ಮನೆಗೆ ಪ್ರತ್ಯೇಕ ಕಸದ ಬುಟ್ಟಿಗಳನ್ನೂ ವಿತರಿಸಲಾಗಿದೆ. ಜನರೂ ಕಸವನ್ನು ಪ್ರತ್ಯೇಕಿಸಿಯೇ ನೀಡುತ್ತಾರೆ. ಹಾಗೆ ನೀಡಿಲ್ಲವೆಂದರೆ ಕಸ ಸಂಗ್ರಹದ ವಾಹನದಲ್ಲಿ ಬರುವವರು ಕಸವನ್ನು ಪಡೆಯುವುದೇ ಇಲ್ಲ. ಆದರೆ, ಇಲ್ಲಿಂದ ಪ್ರತ್ಯೇಕಿಸಿ ಸಂಗ್ರಹಿಸಿದ ಕಸವನ್ನು ಅಲ್ಲಿ ಒಂದೇ ಕಡೆ ಸುರಿಯಲಾಗುತ್ತಿರುವುದು ಕಂಡುಬಂದಿದೆ. ತ್ಯಾಜ್ಯ ಸಂಸ್ಕರಣಾ ಘಟಕಗಳು ನಿಷ್ಕ್ರಿಯವಾಗಿದ್ದು, ಈಗ ಹಸಿ ಕಸ, ಒಣ ಕಸ ಮತ್ತು ಮೆಡಿ ವೇಸ್ಟ್ ಎಲ್ಲವನ್ನೂ ಒಂದೇ ಜಾಗದಲ್ಲಿ ಸುರಿಯಲಾಗುತ್ತಿದೆ.
ಸಾಂಕ್ರಮಿಕ ರೋಗದ ಭೀತಿ: ನಗರಸಭೆ ಸೂಚನೆಯಂತೆ ನಗರದ ೨೩ ವಾರ್ಡ್‌ಗಳಿಂದ ರಾಶಿ-ರಾಶಿ ಕಸವನ್ನು ಸಂಗ್ರಹಿಸಿ ತಂದು ಸ್ಟೋನ್ ಹಿಲ್‌ನಲ್ಲಿ ಸುರಿಯಲಾಗುತ್ತಿದೆ. ಇದೀಗ ಬೆಟ್ಟದಲ್ಲಿ ಸಂಗ್ರವಾಗಿರುವ ಕಸ, ವಿಲೇವಾರಿ ಘಟಕದಲ್ಲಿ ಸೂಕ್ತ ನಿರ್ವಹಣೆ ಇಲ್ಲದಿರುವುದರಿಂದ ಕಸದ ರಾಶಿ ಬೆಟ್ಟದ ತುಂಬೆಲ್ಲ ಹರಡುತ್ತಿದೆ. ಇದರೊಂದಿಗೆ ಈ ನಡುವೆ ಮಳೆಗೆ ನೀರು ಆವರಿಸಿಕೊಂಡು ಕೆಟ್ಟ ವಾಸನೆ ಸೃಷ್ಟಿಯಾಗಿದೆ. ಜತೆಗೆ ಕಸದ ತುಂಬೆಲ್ಲ ಸೊಳ್ಳೆ-ನೊಣಗಳ ಹಾವಳಿಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ನಗರವಾಸಿಗಳಿದ್ದಾರೆ.
ಮಡಿಕೇರಿಯಲ್ಲಿ ಹಿಂದೆ ಸ್ವಲ್ಪಕಾಲ ಕಸದಿಂದ ಗೊಬ್ಬರ ತಯಾರಿಸಲಾಗುತ್ತಿತ್ತು. ಈಗ ಅದು ಸ್ಥಗಿತವಾಗಿದೆ. ಮನೆಗಳಿಂದ ಕಸವನ್ನು ಪ್ರತ್ಯೇಕಿಸಿ ಕೊಂಡೊಯ್ಯುತ್ತಾರೆ. ಅಲ್ಲಿ ಒಂದೇ ಜಾಗಕ್ಕೆ ಸುರಿಯುತ್ತಿದ್ದಾರೆ. ಇದರಿಂದ ತ್ಯಾಜ್ಯ ಕೊಳೆತು, ಸುತ್ತಮುತ್ತಲ ಪ್ರದೇಶವೇ ಮಲೀನವಾಗುತ್ತಿದೆ. ಈಬಗ್ಗೆ ನಗರಸಭೆ ಆಡಳಿತ ಮಂಡಳಿಯಾಗಲೀ, ಅಧಿಕಾರಿಗಳಾಗಲೀ ತಲೆಕೆಡಿಸಿಕೊಂಡಂತಿಲ್ಲ.
ರವಿ ಗೌಡ, ಕರವೇ ಅಧ್ಯಕ್ಷ
ಮಡಿಕೇರಿಯಲ್ಲಿ ಕಳೆದ ಬಹಳಷ್ಟು ವರ್ಷಗಳಿಂದ ತ್ಯಾಜ್ಯ ವಿಲೇವಾರಿಯ ಸಮಸ್ಯೆ ಇದೆ. ಸುಬ್ರಮಣ್ಯ ನಗರದ ಮೇಲ್ಭಾಗದಲ್ಲಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ತ್ಯಾಜ್ಯ ವಿಂಗಡನೆಗೆಂದು ಯಂತ್ರೋಪಕರಣಗಳಿದ್ದರೂ ಕೂಡ ಸಮರ್ಪಕವಾಗಿ ನಿರ್ವಹಣೆ ಆಗುತ್ತಿಲ್ಲ. ತ್ಯಾಜ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸುಬ್ರಮಣ್ಯನಗರ ಹಾಗು ರೈಫಲ್ ರೇಂಜ್ ಸುತ್ತಮುತ್ತ ವಾಸಿಸುವವರಿಗೆ ಸಾಂಕ್ರಾಮಿಕ ಕಾಯಿಲೆಯ ಭಯ ಉದ್ಭವಿಸಿದೆ. ಶಾಸಕರು ಹಾಗು ಸಚಿವರು ಇತ್ತ ಗಮನಹರಿಸಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಪರಿಹಾರ ನೀಡಬೇಕಿದೆ.
ಚಂದನ್ ನಂದರಬೆಟ್ಟು, ನಗರ ನಿವಾಸಿ