ಹಲಗೂರು: ಸಮೀಪದ ಗುಂಡಾಪುರ ಗ್ರಾಮದ ಬೆಟ್ಟದ ಅರಸಮ್ಮ ದೇವಿಯ ಜಾತ್ರಾ ಮಹೋತ್ಸವ ಮಾ.1 ರಿಂದ 8ರವರೆಗೆ ಸಂಭ್ರಮದಿಂದ ನಡೆಯಲಿದೆ.
ಬಾಳೆ ಹೊನ್ನಿಗ, ದಳವಾಯಿ ಕೋಡಿಹಳ್ಳಿ, ನಂದೀಪುರ, ಕೆಂಪಯ್ಯನದೊಡ್ಡಿ, ಎಚ್.ಬಸಾಪುರ, ಹಾಗಾದೂರು ಮತ್ತು ಗುಂಡಾಪುರ ಹಾಗೂ ಹಲಗೂರು ಸೇರಿದಂತೆ ಏಳು ಗ್ರಾಮದ ಭಕ್ತರು ಒಟ್ಟಿಗೆ ಸೇರಿ ಜಾತ್ರೋತ್ಸವ ಆಚರಿಸುವುದು ವಿಶೇಷ.
ಜಾತ್ರಾ ಮಹೋತ್ಸವ ನಿಗದಿಯಾದ ನಂತರ ಊರಿನಲ್ಲಿ ಹಬ್ಬ ನಡೆಯುತ್ತದೆ ಎಂದು ಸಾರಿದ ಮೇಲೆ ಯಾರು ಸಹ ಸುತ್ತಮುತ್ತಲ ಗ್ರಾಮಗಳಲ್ಲಿ ಒಗ್ಗರಣೆ ಹಾಕುವಂತಿಲ್ಲ. ಈ ದೇವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡು ಹಬ್ಬವನ್ನು ಬಾರಿ ಭಕ್ತಿಯಿಂದ ಆಚರಿಸುತ್ತಾರೆ.
ತಟ್ಟೆ ಪೂಜೆ ಒಂದು ವಿಶೇಷವಾದರೆ ದೊಡ್ಡ ಜಾತ್ರೆಯ ದಿನ ಬಾರಿ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ತಮ್ಮ ಹಸುಗಳನ್ನು ಜಾತ್ರೆಗೆ ಕರೆತಂದು ಉರ್ಜಿ ಆಡಿಸುವುದು ಒಂದು ವಿಶೇಷವಾಗಿದೆ.
ಗ್ರಾಮದ ಮಧ್ಯಭಾಗದಲ್ಲಿರುವ ಕರಗದ ಮನೆಯಿಂದ ದೇವರ ಕರಗವನ್ನು ಹೊತ್ತ ಅರ್ಚಕರು ಬೆಟ್ಟದ ತಪ್ಪಲಿನಲ್ಲಿರುವ ದೇವಸ್ಥಾನಕ್ಕೆ ಹೊರಟಾಗ ರಾತ್ರಿ ಮುತ್ತೈದೆಯರು ದೀಪದ ಆರತಿ ಬೆಳಗುವುದು ಒಂದು ವಿಶೇಷ.
ಮಾ.1ರಂದು ಬುಧವಾರ 4 ಗಂಟೆಗೆ ಮೊದಲ ಪೂಜೆ, ಬಾಯಿ ಬೀಗ, ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಮಾ.4ರಂದು ತಟ್ಟೆ ಪೂಜೆ, ಬಾಯಿ ಬೀಗ, ಉರ್ಜಿ ಸೇರಿದಂತೆ ಪೂಜಾ ಮೆರವಣಿಗೆ ನಡೆಯಲಿವೆ. ಮಾ.7ರಂದು ದೊಡ್ದ ಜಾತ್ರೆ, ರಾತ್ರಿ ಊರ್ಜಿ, ದೇವರ ಉತ್ಸವ, ಮಾ.8ರಂದು ಎಳವಾರ ಪೂಜೆ, ಮಾ.9ರಂದು ಮುಂಜಾನೆ ಕೊಂಡೋತ್ಸವ ನಡೆಯಲಿದೆ.
ಜಾತ್ರಾ ಮಹೋತ್ಸವದಲ್ಲಿ ಬೆಂಗಳೂರು, ಮೈಸೂರು, ರಾಮನಗರ, ಚನ್ನಪಟ್ಟಣ, ಕನಕಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.