ಬೆಳಗಾವಿ: ಗ್ರಾಮೀಣ ಭಾಗಗಳಲ್ಲಿ ಮರಳು ಮಾಫಿಯಾಗೆ ಪರ್ಯಾಯವಾಗಿ ಇದೀಗ ಜಿಲ್ಲೆಯಲ್ಲಿ ಕೆಂಪು ಮಣ್ಣು ಮಾಫಿಯಾವೂ ತಲೆ ಎತ್ತಿದೆ! ಗುಡ್ಡಗಾಡು ಪ್ರದೇಶದ ನೈಸರ್ಗಿಕ ಸಂಪತ್ತು ಖಾಸಗಿ ವ್ಯಕ್ತಿಗಳ ಅಕ್ರಮ ಆದಾಯದ ಮೂಲವಾಗಿದೆ.
ಕಂದಾಯ ಅಧೀನದಲ್ಲಿರುವ ನೂರಾರು ಎಕರೆ ಗುಡ್ಡಗಾಡು ಪ್ರದೇಶಗಳ ಸಮರ್ಪಕವಾದ ನಿರ್ವಹಣೆ ಕೊರತೆ, ರಕ್ಷಣೆಗೆ ಬೇಲಿ ಅಳವಡಿಸದಿರುವುದು, ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಅಕ್ರಮ ದಂಧೆಗೆ ಅವಕಾಶ ಮಾಡಿಕೊಟ್ಟಂತಾಗಿದೆ. ರಾಜ್ಯ, ಜಿಲ್ಲಾ ಮುಖ್ಯ ರಸ್ತೆಗಳ ದುರಸ್ತಿಗೆ, ಕಟ್ಟಡಗಳ ನಿರ್ಮಾಣಕ್ಕಾಗಿ ಪರವಾನಗಿ ಇಲ್ಲದೆ ಗುಡ್ಡಗಾಡುಗಳಲ್ಲಿ ಲಭ್ಯವಿರುವ ಮಣ್ಣು ಕೊಳ್ಳೆ ಹೊಡೆಯುತ್ತಿದ್ದಾರೆ. ಅಲ್ಲದೆ, ದಂಧೆಕೋರರು ಸರ್ಕಾರಕ್ಕೆ ತೆರಿಗೆಯನ್ನೂ ನೀಡದೆ ವಂಚಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಬೃಹತ್ ಕಂದಕ ನಿರ್ಮಾಣ: ಗೋಕಾಕ, ಸವದತ್ತಿ, ಮೂಡಲಗಿ, ರಾಮದುರ್ಗ, ಕಿತ್ತೂರು ಸೇರಿದಂತೆ ವಿವಿಧ ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು 2.5 ಸಾವಿರ ಹೆಕ್ಟೇರ್‌ಗೂ ಅಧಿಕ ಕಂದಾಯ ಇಲಾಖೆಗೆ ಸೇರಿದ ಗುಡ್ಡಗಾಡು ಪ್ರದೇಶ ಇದೆ. ಕಳೆದ 20 ವರ್ಷಗಳ ಅವಧಿಯಲ್ಲಿ ಕಲ್ಲು, ಮಣ್ಣು ಮಾಫಿಯಾದವರ ಕನ್ನಕ್ಕೆ ಗುಡ್ಡಗಳು ಕರಗಿ, ಬೃಹತ್ ಕಂದಕಗಳು ನಿರ್ಮಾಣಗೊಂಡಿವೆ. ಜಿಲ್ಲೆಯಲ್ಲಿ ನಿತ್ಯ ನೂರಾರು ಟ್ರಿಪ್ ಕೆಂಪುಮಣ್ಣು ಸಾಗಣೆಯಾಗುತ್ತಿದ್ದರೂ ಸ್ಥಳೀಯ ಮಟ್ಟದ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಗುಡ್ಡಗಾಡು ಸಮೀಪದ ಜನರು ಆರೋಪಿಸುತ್ತಾರೆ.
ಸಂಪತ್ತು ಕೊಳ್ಳೆ: ನೈಸರ್ಗಿಕವಾಗಿ ಲಭ್ಯವಿರುವ ಮಣ್ಣು ಸಾಗಣೆಗೆ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಅಲ್ಲದೆ, ಸ್ಥಳೀಯ ಮಟ್ಟದ ಗ್ರಾಪಂ, ಪಪಂ ಕಚೇರಿಗಳಿಗೆ ತೆರಿಗೆಯನ್ನೂ ಕಟ್ಟಬೇಕು. ಅಲ್ಲದೆ, ಈ ಮಣ್ಣನ್ನು ಸರ್ಕಾರ ಕೈಗೊಳ್ಳುವ ರಸ್ತೆ ದುರಸ್ತಿ, ಕಟ್ಟಡಗಳ ನಿರ್ಮಾಣ ಇನ್ನಿತರ ಕೆಲಸಗಳಿಗೆ ಮಾತ್ರ ಬಳಕೆ ಮಾಡಬೇಕು. ಖಾಸಗಿ ಕಾಮಗಾರಿಗಳಿಗೆ ಬಳಕೆ ಮಾಡುವಂತಿಲ್ಲ. ಇನ್ನು, ಖಾಸಗಿ ಜಮೀನುಗಳಲ್ಲಿ ಮಣ್ಣು ತೆಗೆಯಲು ಆ ಜಮೀನು ಎನ್‌ಎ ಆಗಿರಬೇಕು. ಜತೆಗೆ ಜಿಲ್ಲಾಡಳಿತದ ಪರವಾನಗಿ ಪಡೆದುಕೊಂಡು, ನಿಗದಿತ ಎರಿಗೆಯನ್ನೂ ಭರಿಸಬೇಕು. ಆದರೆ, ಮಣ್ಣು ಸಾಗಣೆ ಮಾಡುತ್ತಿರುವ ದಂಧೆಕೋರರು ಯಾವುದೇ ಪರವಾನಗಿ ಪಡೆಯದೆ, ಸರ್ಕಾರ ನಯಾ ಪೈಸೆ ತೆರಿಗೆಯನ್ನೂ ಪಾವತಿಸದೆ, ಸ್ಥಳೀಯ ಮಟ್ಟದ ಪ್ರಭಾವಿ ವ್ಯಕ್ತಿಗಳಿಗೆ ಹಣ ನೀಡಿ ನೈಸರ್ಗಿಕ ಸಂಪತ್ತು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಂಪು ಮಣ್ಣು ರಸ್ತೆಗಳ ನಿರ್ಮಾಣಕ್ಕೆ ಉಪಯುಕ್ತವಾಗಿದೆ. ಅಲ್ಲದೆ, ಕೆಂಪು ಮಣ್ಣಿನಲ್ಲಿರುವ ಕಲ್ಲುಗಳನ್ನು ಮನೆಯ ಗೋಡೆ ಹಾಗೂ ಕಾಂಪೌಂಡ್
ನಿರ್ಮಾಣಕ್ಕೆ ಬಳಸುತ್ತಾರೆ. ಹೀಗಾಗಿ, ಕೆಂಪು ಮಣ್ಣು ಮತ್ತು ಕಲ್ಲಿಗೆ ಬಂಗಾರದ ಬೆಲೆಯಿದೆ. ಒಂದು ಟ್ರಾೃಕ್ಟರ್, ಟಿಪ್ಪರ್ ಲೋಡ್‌ಗೆ 800ರಿಂದ 1,200 ರೂ. ವರೆಗೆ ಮಾರಾಟವಾಗುತ್ತಿದೆ. ಸಾರ್ವಜನಿಕ ರಸ್ತೆ ನಿರ್ಮಾಣದ ಹೆಸರಿನಲ್ಲಿ ಕೆಲ ಗುತ್ತಿಗೆದಾರರು ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದಾರೆ. ಈ ವಿಚಾರ ತಿಳಿದಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಅಕ್ರಮವಾಗಿ ಮಣ್ಣು ಸಾಗಣೆ ಮಾಡುತ್ತಿರುವವರ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿನ ಗುಡ್ಡಗಳನ್ನು ಅಗೆದು ಕೆಂಪು ಮಣ್ಣು ಅಕ್ರಮವಾಗಿ ಸಾಗಣೆ ಮಾಡುತ್ತಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ಈ ಕುರಿತು ಎಲ್ಲ ತಾಲೂಕು ತಹಸೀಲ್ದಾರರಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿ, ಅಕ್ರಮಕ್ಕೆ ಕಡಿವಾಣ ಹಾಕಲಾಗುವುದು.| ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ, ಬೆಳಗಾವಿ