ಜಿಲ್ಲೆ

ಬೆಚ್ಚಿ ಬೀಳಿಸಿದ ಬಂದೂಕು ಶಬ್ದ

ರಾಜಣ್ಣ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಬಾರ್‌ನಲ್ಲಿ ಶನಿವಾರ ಸಪ್ಲೇಯರ್ ಜತೆ ಜಗಳವಾಡಿದ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದ್ದಾನೆ.

ಗ್ರಾಮದ ವಾಮದೇವ ಎಂಬವರ ಮಗ ನಿಶಾಂತ್ ಎಂಬಾತನೇ ಗುಂಡು ಹಾರಿಸಿ, ಬಂಧಿತನಾಗಿರುವ ವ್ಯಕ್ತಿ.

ಶನಿವಾರ ಮಧ್ಯಾಹ್ನ ಬಾರ್‌ಗೆ ಆಗಮಿಸಿದ ನಿಶಾಂತ್, ಊಟ ಕೇಳಿದ್ದು, ಸಪ್ಲೇಯರ್ ಊಟ ಮುಗಿದಿದೆ ಎಂದಿದಕ್ಕೆ ಆತನೇ ಅಡುಗೆ ಕೋಣೆಗೆ ಹೋಗಿ ನಾನೇ ಅಡುಗೆ ಮಾಡಿಕೊಳ್ಳುತೇನೆ ಎಂದಿದ್ದಾನೆ. ಈ ವೇಳೆ ಸಪ್ಲೇಯರ್ ಆಗಲ್ಲ ಎಂದಿದಕ್ಕೆ, ಅವಾಚ್ಯವಾಗಿ ಬೈದು ನಿಮಗೆ ಬುದ್ಧಿ ಕಲಿಸುತ್ತೇನೆ ಎಂದು ಕೋಪಗೊಂಡು ಮನೆಗೆ ತೆರಳಿ ಡಿಪಿ ಬಿಎಲ್ ಡಬಲ್ ಬ್ಯಾರಲ್ ಬಂದೂಕು ತೆಗೆದುಕೊಂಡು ಬಂದು ಸಫೈಯರ್‌ಗೆ ಹೆದರಿಸುವ ಸಲುವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.

ಇದ್ದಕ್ಕಿದ್ದಂತೆ ನಡೆದ ಈ ಘಟನೆಯಿಂದಾಗಿ ಬಾರ್‌ನಲ್ಲಿ ಇದ್ದವರೆಲ್ಲ ಭಯಭೀತರಾಗಿದ್ದಾರೆ. ಘಟನೆಗೆ ಕಾರಣವಾದ ನಿಶಾಂತ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಬಾರ್ ಕ್ಯಾಷಿಯರ್ ಕುಮಾರ್ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಂದೂಕು ವಶಕ್ಕೆ ಪಡೆದು, ನಿಶಾಂತ್‌ನನ್ನು ಬಂಧಿಸಿದ್ದಾರೆ.

ಜಿಲ್ಲಾ ಅಡಿಷನಲ್ ಎಸ್ಪಿ ನಾಗೇಶ್, ಡಿವೈಎಸ್ಪಿ ಗೋಪಾಲಕೃಷ್ಣ, ಸರ್ಕಲ್ ಇನ್‌ಸ್ಪೆಕ್ಟರ್ ದೀಪಕ್, ಎಸ್‌ಐ ಶಿವಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.