ಚನ್ನರಾಯಪಟ್ಟಣ: ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಯ ಕಾರ್ಯವೈಖರಿ ಶ್ಲಾಘನೀಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ತಾಲೂಕಿನ ಬೆಕ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡೇನಹಳ್ಳಿ, ಮಂಚೇನಹಳ್ಳಿ ಹಾಗೂ ಬೆಕ್ಕ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಜನರ ಶಕ್ತಿಸೌಧ ಗ್ರಾಮ ಪಂಚಾಯಿತಿ. ಇದರಡಿ ಸಾರ್ವಜನಿಕರಿಗೆ ಏನ್ನೆಲ್ಲ ವ್ಯವಸ್ಥೆ ಕಲ್ಪಿಸಬಹುದು ಎನ್ನುವುದನ್ನು ಒಂದು ತಂಡವಾಗಿ ರೂಪಿಸಿ ಎಲ್ಲರ ಮೆಚ್ಚುಗೆ ಗಳಿಸಿದ ಕೀರ್ತಿ ತಾಲೂಕಿನ ಬೆಕ್ಕ ಗ್ರಾಮ ಪಂಚಾಯಿತಿಗೆ ಸಲ್ಲಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಕ್ಕ ಗ್ರಾಮ ಪಂಚಾಯಿತಿಯು 3 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ. ಹಡೇನಹಳ್ಳಿ ಗ್ರಾಮದಲ್ಲಿ ಮಾದರಿ ಅಂಗನವಾಡಿ ಕಟ್ಟಡ, ಮಂಚೇನಹಳ್ಳಿಯಲ್ಲಿ ಕಸ ವಿಲೇವಾರಿ ಘಟಕ ಹಾಗೂ ಬೆಕ್ಕ ಗ್ರಾಮದಲ್ಲಿ ಸಮುದಾಯ ಭವನ, ಡಿಜಿಟಲ್ ಲೈಬ್ರರಿ, ಗ್ರಾಮ ಪಂಚಾಯಿತಿ ಕಟ್ಟಡ, ಉದ್ಯಾನವನ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸ್ವಚ್ಛ ಭಾರತ ಯೋಜನೆಯಡಿ ಕಸ ಸಂಗ್ರಹ ಕಾರ್ಯ ಇಂದಿನಿಂದ ಆರಂಭವಾಗಲಿದ್ದು, ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳ ಪ್ರತಿ ಮನೆಗಳಿಗೆ ಬಕೆಟ್ ನೀಡುವ ಜತೆಗೆ ಕಸ ಸಂಗ್ರಹದ ವಾಹನವನ್ನು ಈಗಾಗಲೇ ಲೈಸನ್ಸ್ ಪಡೆದು ಮಹಿಳೆಯೊಬ್ಬರು ನಿರ್ವಹಿಸಲಿದ್ದಾರೆ ಎಂದರು.
ಗ್ರಾಮದಲ್ಲಿ ನಿರ್ಮಿಸಿರುವ 20 ಲಕ್ಷ ರೂ. ವೆಚ್ಚದ ಉದ್ಯಾನವನ ಜಿಲ್ಲೆಗೆ ಮಾದರಿಯಾಗಿದೆ. ಮಳೆಕೊಯ್ಲು ಪದ್ಧತಿ ಅಳವಡಿಕೆಯಾಗಿದೆ. ಇದ್ದ ಸಮಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಪಿಡಿಒ ಬಾಬು ಹಾಗೂ ಅಧ್ಯಕ್ಷ ಕೇಶವಮೂರ್ತಿ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷ ಕೇಶವಮೂರ್ತಿ, ಉಪಾಧ್ಯಕ್ಷೆ ಪ್ರೀತಿಕುಮಾರಿ, ಮಾಜಿ ಉಪಾಧ್ಯಕ್ಷೆ ಮಂಜಮ್ಮ, ಸದಸ್ಯರಾದ ಲವಣ್ಣ, ಲತಾ, ರಂಗಪ್ಪ, ಶಿರಸ್ತೇದಾರ್ ನಂಜೇಗೌಡ, ಆರ್‌ಐ ರಮೇಶ್, ಮುಖಂಡರಾದ ಪುಟ್ಟಸ್ವಾಮಿ, ನಂಜಪ್ಪ, ಉಮೇಶ್, ಕಗ್ಗರೆ ಬಾಬು, ಪಿಡಿಒ ಬಾಬು ಇತರರು ಇದ್ದರು.