ಜಿಲ್ಲೆ

ಬೆಂಬಿಡದ ಉತ್ತರಾಧಿಕಾರಿ ವಿವಾದ

ಹುಬ್ಬಳ್ಳಿ: ರಾಜ್ಯದ ಪ್ರಮುಖ ವಿರಕ್ತ ಮಠಗಳಲ್ಲಿ ಒಂದಾಗಿರುವ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಉತ್ತರಾಧಿಕಾರಿ ವಿವಾದ ಮತ್ತೆ ಭುಗಿಲೆದ್ದಿದೆ.

ಈ ಮಠಕ್ಕೆ ಉತ್ತರಾಧಿಕಾರಿ ವಿವಾದ ಇಂದು, ನಿನ್ನೆಯದ್ದಲ್ಲ. ಶ್ರೀ ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ ಅವರ ಕಾಲದಲ್ಲಿ ಹಾಗೂ ಅವರ ಲಿಂಗೈಕ್ಯರಾದ ನಂತರವೂ ಈ ವಿವಾದ ಕಾಡುತ್ತಲೇ ಇದೆ.

ಕೊಟ್ಟ ಮಾತಿನಂತೆ ನಡೆಯಿರಿ. ನನ್ನ ಮರ್ಯಾದೆ ಪ್ರಶ್ನೆ ಇದು ಎಂದು ಉತ್ತರಾಧಿಕಾರಿ ಸ್ಥಾನಕ್ಕೆ ನೇಮಣೂಕಿ ಮಾಡಲಾಗಿರುವ ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿರುವುದು ಬಹುತೇಕರಿಗೆ ಮುಳುವಾಗಿದೆ. ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿ ಏನೇನು ನಡೆಯಿತು ಎಂದು ಫೆ. 23ರಂದು ಮಠಕ್ಕೆ ಬಂದು ತಿಳಿಸುವಂತೆ ಅವರು ಆಹ್ವಾನಿಸಿರುವುದು ಒಂದು ರೋಚಕ ತಿರುವಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ. ದಿಂಗಾಲೇಶ್ವರ ಸ್ವಾಮೀಜಿ ಅವರು 23ರ ಸಭೆಗೆ ಸಾರ್ವಜನಿಕರೂ ಬರುವಂತೆ ಮುಕ್ತ ಆಹ್ವಾನ ನೀಡುತ್ತಿದ್ದಾರೆ. ಸಭೆ ದಿನ ಸಮೀಪಿಸುತ್ತಿದ್ದಂತೆಯೇ ಮಠಕ್ಕೆ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.

ಉತ್ತರಾಧಿಕಾರಿ ವಿವಾದದಿಂದ ಘರ್ಷಣೆಗಳೂ ನಡೆದಿದ್ದವು. ಪ್ರಕರಣ ಸವೋಚ್ಚ ನ್ಯಾಯಾಲಯದವರೆಗೂ ಹೋಗಿ, ಆರ್ಬಿಟ್ರೇಶನ್ ಮುಖಾಂತರ ಇತ್ಯರ್ಥಗೊಂಡಿತು. ಇದು ಅತಿ ದೀರ್ಘ ಕಾಲದ ಮತ್ತು ಜಟಿಲ ವಿವಾದ ಎಂದೇ ಹೇಳಲಾಗಿದೆ.

2009ರಲ್ಲಿ ಹಿಂದಿನ ಮೂಜಗಂ ಉತ್ತರಾಧಿಕಾರಿ ವಿವಾದ ಬಗೆಹರಿದು, ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ (ಮೂಜಗು)ಶಾಶ್ವತವಾಗಿ ಪೀಠಾಧಿಪತಿ ಯಾದರು. ಆದರೆ 2014ರಿಂದ ಈಗಿನ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಯವರ ಉತ್ತರಾಧಿಕಾರಿಯ ವಿವಾದ ಆರಂಭವಾಯಿತು.

ಈ ವಿವಾದದ ಕೇಂದ್ರ ಬಿಂದು ಸ್ವತಃ ಮೂಜಗು ಅವರೇ. ಅನಾರೋಗ್ಯದಿಂದಾಗಿ ಮಠವನ್ನು ಸರಿಯಾಗಿ ನಡೆಸಿಕೊಂಡು ಹೋಗುವುದು ತಮ್ಮಿಂದ ಸಾಧ್ಯವಿಲ್ಲವೆಂದು ಭಕ್ತಗಣಗಳ ಮಧ್ಯೆ ಮತ್ತು ಗಣ್ಯರ ಸಮಿತಿ ಮಧ್ಯೆ ಹೇಳಿಕೊಳ್ಳುತ್ತಿದ್ದ ಮೂಜಗು, ಉತ್ತರಾಧಿಕಾರಿಯನ್ನಾಗಿ ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿಯವರ ಹೆಸರು ಸೂಚಿಸಿ, ಗಣ್ಯರ ಮನೆಗೆ ತಾವೇ ಅವರನ್ನು ಕರೆದುಕೊಂಡು ಹೋಗಿ ಒತ್ತಾಯ ಮಾಡಿದ್ದರು. ಮೂರುಸಾವಿರ ಮಠದಲ್ಲಿಯೇ ಆಧ್ಯಾತ್ಮಿಕ ಶಿಕ್ಷಣ ಪಡೆದು, ಅಲ್ಲಿಯೇ ಬೆಳೆದ ದಿಂಗಾಲೇಶ್ವರ ಸ್ವಾಮೀಜಿ, ಲಕ್ಷೆ್ಮೕಶ್ವರ ಸಮೀಪದ ಬಾಲೇಹೊಸೂರಿನಲ್ಲಿ ಮಠ ಸ್ಥಾಪಿಸಿದರು. ಆದರೂ ಮೂರುಸಾವಿರ ಮಠದ ಕೋರ್ಟ್ ವಿವಾದದಲ್ಲಿ ಹಣಕಾಸಿನ ನೆರವು ಹಾಗೂ ನೈತಿಕ ಬಲ ನೀಡಿದ ದಿಂಗಾಲೇಶ್ವರ ಸ್ವಾಮೀಜಿ, ಮಠವನ್ನು ಸುರಕ್ಷಿತವಾಗಿ ಉಳಿಸಿಕೊಟ್ಟ ಪ್ರಮುಖರಲ್ಲಿ ಒಬ್ಬರು.

ದಿಂಗಾಲೇಶ್ವರ ಸ್ವಾಮೀಜಿ ಅವರು ಮೂಜಗು ಅವರಿಗೂ ಆಪ್ತರು. ಇದೇ ಹಿನ್ನೆಲೆಯಲ್ಲಿ ಅವರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಲು ಮೂಜಗು ಎಲ್ಲೆಡೆ ಓಡಾಡಿದರು. ನಂತರ ವಿವಾದಗಳು ಉಂಟಾಗಿ, ಒಟ್ಟಾರೆ ಉತ್ತರಾಧಿಕಾರಿ ವಿಷಯ ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ ನೇಮಕ ಪ್ರಕ್ರಿಯೆ ಅಲ್ಲಿಗೆ ತಟಸ್ಥಗೊಂಡಿತು.

ಇತ್ತೀಚೆಗೆ ಸ್ಥಳೀಯ ನ್ಯಾಯಾಲಯ ಈ ವಿವಾದ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಹೇಳಿದೆ. ಸದ್ಯ ಯಾವುದೇ ತಡೆಯಾಜ್ಞೆಯೂ ಇಲ್ಲ. ಆದರೆ, ಉತ್ತರಾಧಿಕಾರಿ ಪ್ರಶ್ನೆ, ಕಾನೂನು ತೊಡಕಿನ ಬಗ್ಗೆ ಇನ್ನೂ ಜಿಜ್ಞಾಸೆ ಉಳಿದುಕೊಂಡಿದೆ.

ಈ ಮಧ್ಯೆ ಹಿಂದಿನ ಮಾತಿನಂತೆ ಮೂರುಸಾವಿರ ಮಠಕ್ಕೆ ಉತ್ತರಾಧಿಕಾರಿ ನೇಮಕಗೊಳಿಸುವಂತೆ ಭಕ್ತರಿಂದ ಒತ್ತಾಸೆ ಕೇಳಿಬರುತ್ತಿದೆ. ಮಠ ನಿಷ್ಕ್ರಿಯಗೊಂಡಿರುವುದು, ಮೂಜಗು ಅವರು ಕೂಡ ಮಠದಲ್ಲಿ ಅಪರೂಪವಾಗಿರುವುದು, ಹಬ್ಬ, ಹುಣ್ಣಿಮೆ, ಪಾದಪೂಜೆ, ಅಯ್ಯಾಚಾರದಂಥ ಧಾರ್ವಿುಕ ಚಟುವಟಿಕೆಗಳು ಸ್ಥಗಿತಗೊಂಡಿರುವುದು ಭಕ್ತರಿಗೆ ಬೇಸರ ಉಂಟುಮಾಡಿವೆ. ಹೀಗಾಗಿ ಹೊಸ ಪೀಠಾಧಿಕಾರಿ ನೇಮಕವಾಗಬೇಕೆಂಬುದು ಭಕ್ತರ ಒತ್ತಾಸೆಯಾಗಿದೆ.

ಹಲವು ಗಣ್ಯರು ದಿಂಗಾಲೇಶ್ವರ ಸ್ವಾಮೀಜಿ ಪರವಾಗಿದ್ದಾರೆ. ಸಹಿ ಮಾಡಿದ 52 ಜನರಲ್ಲಿ ಹೆಚ್ಚಿನವರ ಒಲವೂ ಹಾಗೇ ಇದೆ. ಕೆಲವರಷ್ಟೇ ಭಿನ್ನಾಭಿಪ್ರಾಯ ತಳೆದಿರುವುದು ವಿವಾದಕ್ಕೆ ಕಾರಣವಾಗಿದೆ.

ದಿಂಗಾಲೇಶ್ವರ ಸ್ವಾಮೀಜಿ ಸಮರ್ಥ ಆಡಳಿತಗಾರರು, ಕ್ರಿಯಾಶೀಲರು. ಅವರು ಉತ್ತರಾಧಿಕಾರಿಯಾದರೆ, ಸದ್ಯ ಮಠದ ಆಸ್ತಿ ಅನುಭವಿಸುತ್ತಿರುವವರಿಗೆ ಸಮಸ್ಯೆ ಆಗುತ್ತದೆ. ಯಾರು ಯಾರೋ ಮಠದ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಲು ಅವರು ಆಸ್ಪದ ನೀಡುವುದಿಲ್ಲ. ಇದೇ ಕಾರಣಕ್ಕಾಗಿ ಅಂಥವರು ದಿಂಗಾಲೇಶ್ವರ ಸ್ವಾಮೀಜಿ ಉತ್ತರಾಧಿಕಾರಿಯಾಗುವುದನ್ನು ವಿರೋಧಿಸುತ್ತಿದ್ದಾರೆನ್ನಲಾಗಿದೆ.

ಮೂಜಗು ಅವರು ಮುನವಳ್ಳಿ ಹಾಗೂ ಹಾನಗಲ್ ಮಠಗಳಿಗೂ ಪೀಠಾಧಿಪತಿ. ಇದರೊಂದಿಗೆ ತಮಗೆ ವಯಸ್ಸಾಗಿದ್ದು, ಆರೋಗ್ಯ ಚೆನ್ನಾಗಿಲ್ಲ. ಕಾಯಿಲೆ, ಖಿನ್ನತೆಯಿಂದ ಬಳಲುತ್ತಿರುವುದಾಗಿ ಅಫಿಡೆವಿಟ್​ನಲ್ಲಿ ಸ್ವತಃ ಮೂಜಗು ಹೇಳಿಕೆ ನೀಡಿದ್ದಾರೆ. ಇದೇ ಕಾರಣಕ್ಕಾಗಿ ನೇಮಣೂಕಿ ಪತ್ರ ಮಾಡಿಕೊಟ್ಟಿರುವ ಅವರು, ಈಗಲೂ ದಿಂಗಾಲೇಶ್ವರರೇ ಉತ್ತರಾಧಿಕಾರಿ ಎನ್ನುತ್ತಿದ್ದಾರೆ. ಆದರೆ, ಕಾಲ ಕೂಡಿ ಬಂದಿಲ್ಲ, ದಿಂಗಾಲೇಶ್ವರರು ತಾಳ್ಮೆಯಿಂದ ಇರಬೇಕು ಎಂದೂ ಹೇಳುತ್ತಿದ್ದಾರೆ. ಈ ಇಬ್ಬಂದಿತನವೇ, ಸದ್ಯದ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ.

ದಿಂಗಾಲೇಶ್ವರ ಸ್ವಾಮೀಜಿ ಫೆ. 23ರಂದು ಮೂರುಸಾವಿರ ಮಠದಲ್ಲಿ ಕರೆದಿರುವ ಬಹಿರಂಗ ಸಭೆ ಮತ್ತು ಹಾಕಿರುವ ಸವಾಲು ಈಗ ವೀರಶೈವ ಸಮುದಾಯ ಮತ್ತು ಮೂರುಸಾವಿರ ಮಠದ ಭಕ್ತ ವೃಂದದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಸಭೆ ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದ ವಿವಾದಕ್ಕೆ ರ್ತಾಕ ಅಂತ್ಯ ಕಾಣಿಸಿ, ಮುಂದೆ ಎಲ್ಲವೂ ಸುಸೂತ್ರವಾಗಿ ನಡೆಯುವಂತಾಗಲಿ ಎಂದು ಭಕ್ತರು ಅಪೇಕ್ಷಿಸುತ್ತಿದ್ದಾರೆ.

ದಿಂಗಾಲೇಶ್ವರರೇ ಉತ್ತರಾಧಿಕಾರಿ ಎಂದಿದ್ದರು ಮೂಜಗು ಶ್ರೀಗಳು

ಹುಬ್ಬಳ್ಳಿ: ತಮ್ಮ ಉತ್ತರಾಧಿಕಾರಿ ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರೇ ಎಂದು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ನನ್ನೆದುರು ಸ್ಪಷ್ಟಪಡಿ ಸಿದ್ದರು. ಅದನ್ನೇ ನಾನು ನ್ಯಾಯಾಲಯದಲ್ಲಿಯೂ ವಾದಿಸಿದ್ದೆ ಎಂದು ಹಿರಿಯ ನ್ಯಾಯವಾದಿ ಜಿ.ಆರ್. ಅಂದಾನಿಮಠ ಹೇಳಿದ್ದಾರೆ.

ಮಠದ ಉತ್ತರಾಧಿಕಾರಿ ವಿವಾದಕ್ಕೆ ಸಂಬಂಧಿಸಿದಂತೆ ‘ವಿಜಯವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಅವರು, ಫೆ. 23ರಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಅವರು ಮೂರುಸಾವಿರ ಮಠದಲ್ಲಿ ಕರೆದಿರುವ ಸಭೆಗೆ ಒಬ್ಬ ನ್ಯಾಯವಾದಿಯಾಗಿ ತಾವು ಪಾಲ್ಗೊಳ್ಳಬೇಕೊ ಅಥವಾ ಬೇಡವೊ

ಎಂಬುದನ್ನು ಇನ್ನೂ ನಿಶ್ಚಯಿಸಿಲ್ಲ. ಈ ಬಗ್ಗೆ ಯೋಚಿಸಬೇಕು ಎಂದರು. ಮೂಜಗು ಅವರು ಪೀಠ ತ್ಯಾಗ ಮಾಡಿ ಹಾನಗಲ್​ಗೆ ತೆರಳಿದ್ದರು. ಆಗ ನನಗೆ ಮಠದ ಕೇಸ್​ನಲ್ಲಿ ಮೂಜಗು ಅವರೊಂದಿಗೆ ಸಮಾಲೋಚಿಸುವ ಅಗತ್ಯವಿತ್ತು.

ಹಾನಗಲ್​ಗೆ ಫೋನ್ ಮಾಡಿ, ಈ ಕುರಿತು ವಿಚಾರಿಸಿದಾಗ ಅಲ್ಲಿನ ಭಕ್ತರು ಹಾನಗಲ್​ಗೆ ಬಂದು ಮಾಹಿತಿ ಪಡೆಯುವಂತೆ ಸೂಚಿಸಿದ್ದರು. ಒಬ್ಬ ನ್ಯಾಯವಾದಿಯಾಗಿ ಕಕ್ಷಿದಾರರ ಬಳಿ ತೆರಳಿ ಮಾಹಿತಿ ಸಂಗ್ರಹಿಸುವುದು ಸರಿ ಎನಿಸಲಿಲ್ಲ. ನಾನು ಅವರ ಕೇಸಿನ ದಾಖಲೆಗಳನ್ನು ಅಂಚೆ ಮೂಲಕ ಮರಳಿಸಿ, ಕೇಸ್​ನಿಂದ ನಿವೃತ್ತನಾದೆ ಎಂದು ಹೇಳಿದರು.

ಮಠದ ಯಾವುದೇ ಕೇಸ್​ಅನ್ನು ಸ್ವೀಕರಿಸುವುದಿಲ್ಲವೆಂದೂ ಆ ಸಂದರ್ಭದಲ್ಲಿ ಹೇಳಿದ್ದೆ. ಆದರೆ ಶ್ರೀ ದಿಂಗಾಲೇಶ್ವರ ಸ್ವಾಮೀಜಿಯವರು ನನ್ನಲ್ಲಿ ಬಂದು ಮಠದ ಸೇವೆ ಮಾಡುವಂತೆ ಒತ್ತಾಯಪೂರ್ವಕವಾಗಿ ಕೇಳಿಕೊಂಡರು. ಆಗ ಮೂರುಸಾವಿರ ಮಠಕ್ಕೆ ತೆರಳಿ, ದಿಂಗಾಲೇಶ್ವರ ಶ್ರೀಗಳನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದ್ದು ನಿಮ್ಮ ಖಚಿತ ನಿಲುವೇ? ಎಂದು ಪ್ರಶ್ನಿಸಿದ್ದೆ. ಮೂಜಗು ಅವರು, ‘ಹೌದು ಸಾಹೇಬರೆ, ಇದು ನನ್ನ ಅಂತಿಮ ನಿರ್ಣಯ’ವೆಂದು ಉತ್ತರಿಸಿದ್ದರೆಂದು ಅಂದಾನಿಮಠ ಸ್ಪಷ್ಟಪಡಿಸಿದರು.

ಬಸವಣ್ಣನವರು ‘ನುಡಿದಂತೆ ನಡೆ ಇದೇ ಜನ್ಮ ಕಡೆ’ ಎಂದಿದ್ದಾರೆ. ಅದರಂತೆ ಮೂಜಗು ಅವರು ಕೊಟ್ಟ ಮಾತಿನಂತೆ ನಡೆದುಕ್ಳೊಬೇಕು. ಅಂದು ಸಮಾಜದಲ್ಲಿ ದೈವದ ಮುಂದೆ, ಅಂದರೆ ಕರ್ತೃ ಗದ್ದುಗೆಯ ಎದುರು, ‘ನಾನು ದಿಂಗಾಲೇಶ್ವರ ಶ್ರೀಗಳನ್ನು ಉತ್ತರಾಧಿಕಾರಿಯಾಗಿ ಮಾಡುತ್ತೇನೆ’ ಎಂದಿದ್ದರು. ದೈವದ ಮುಂದೆಯೇ ದಾಖಲೆಪತ್ರಗಳೆಲ್ಲ ಆಗಿವೆ. ಅದರಂತೆಯೇ ನಡೆದುಕೊಳ್ಳಬೇಕು. ದೈವದ ಮುಂದೆಯೇ ಆಗಿರುವುದರಿಂದ ಯಾವ ಕಾನೂನಿನ ಅಡ್ಡಿಯೂ ಇಲ್ಲ. ಕಾವಿಧಾರಿಗಳ ಬಗ್ಗೆ ಸಮಾಜಕ್ಕೆ ಗೌರವ ಇದೆ, ಅವರು ಮಾತು ಬದಲಾಯಿಸಬಾರದು. ಪದೇ ಪದೆ ಕಾರಣ ಹೇಳುತ್ತ ಇರಬಾರದು. ಒಮ್ಮೆ ಕೊಟ್ಟ ಮಾತಿನಂತೆಯೇ ನಡೆದುಕೊಳ್ಳಬೇಕು. ಅದು ಎಲ್ಲ ದೃಷ್ಟಿಯಂದಲೂ ಹಿತಕರ.| ವಿ.ಜಿ. ಪಾಟೀಲ ಹಿರಿಯ ನ್ಯಾಯವಾದಿ, ಹುಬ್ಬಳ್ಳಿ
ನನ್ನಷ್ಟಕ್ಕೆ ನಾನು ಇದ್ದಾಗ ಉತ್ತರಾಧಿಕಾರಿ ಆಗಬೇಕೆಂದು ಒತ್ತಾಯಿಸಿ ಕರೆತಂದು ನೇಮಣೂಕಿ ಪತ್ರವನ್ನೂ ಸಿದ್ಧಪಡಿಸಿದವರು ಈಗ ನನ್ನ ಬಗೆಗೆ ಆಕ್ಷೇಪ ಹಾಗೂ ಆರೋಪ ಮಾಡುತ್ತಿರುವುದರ ಹಿಂದಿನ ಷಡ್ಯಂತ್ರ ಏನು? ಹಾಗೂ ಒಟ್ಟಾರೆ ಸತ್ಯ ಏನೆಂಬುದು ಸಾರ್ವಜನಿಕರಿಗೆ ಸ್ಪಷ್ಟವಾಗಬೇಕಾಗಿದೆ. ನನ್ನ ಮರ್ಯಾದೆಯ ಪ್ರಶ್ನೆಯೂ ಇದರಲ್ಲಿ ಇದೆ. ಮರ್ಯಾದಸ್ಥ ನೂರು ಮಠ ಬೇಕಾದರೂ ಕಟ್ಟಬಲ್ಲ. ಆದ್ದರಿಂದ, ನೇಮಣೂಕಿ ಪತ್ರಕ್ಕೆ ಸಹಿ ಹಾಕಿದ ಗಣ್ಯರು, ಸ್ವಾಮಿಗಳು, ನ್ಯಾಯವಾದಿಗಳು; ಆರೋಪ ಮಾಡುವವರು, ತಾನೇ ಪೀಠಾಧಿಕಾರಿ ಎಂದು ಹೇಳಿಕೊಳ್ಳುವವರೆಲ್ಲ ಅಂದು ಬಹಿರಂಗ ಸಭೆಗೆ ಬರಲಿ. ಸತ್ಯ ಏನೆಂದು ಜನತೆಗೆ ತಿಳಿಸಲಿ.| ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಬಾಲೇಹೊಸೂರು ಮಠ