ಚಿತ್ರದುರ್ಗ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಖರೀದಿಗೆ ಡಿ. 1ರಿಂದ 31ರವರೆಗೆ ನೋಂದಣಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿ, ಪ್ರತಿ ಕ್ವಿಂಟಾಲ್ ರಾಗಿಗೆ 4290 ರೂ. ದರ ನಿಗದಿ ಮಾಡಲಾಗಿದೆ. 2025 ಜ. 1ರಿಂದ ಮಾರ್ಚ್ 31ರವರೆಗೆ ಖರೀದಿಸಲಾಗುವುದು ಎಂದರು.
ಹೊಸದುರ್ಗ, ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲೂಕಲ್ಲಿ ಹೆಚ್ಚಿನ ರಾಗಿ ಬಿತ್ತನೆಯಾಗಿದ್ದು, ಉತ್ತಮ ಇಳುವರಿ ನಿರೀಕ್ಷೆ ಇದೆ. ಹೊಸದುರ್ಗ ತಾಲೂಕಲ್ಲಿ ಹೆಚ್ಚುವರಿಯಾಗಿ ಖರೀದಿ ಕೇಂದ್ರ ಸ್ಥಾಪಿಸಬೇಕು. ನೇರ ರೈತರಿಂದಲೇ ಖರೀದಿಸಲಾಗುವುದು. ಮಾರಾಟ ಮಾಡುವ ರೈತರ ಪಹಣಿಯಲ್ಲಿ ರಾಗಿ ಎಂದು ಕಡ್ಡಾಯವಾಗಿ ನಮೂದಿರಬೇಕು. ಮಧ್ಯವರ್ತಿಗಳಿಗೆ ಅವಕಾಶವಿಲ್ಲವೆಂದರು.
ಸರ್ಕಾರ ನೇಮಿಸಿರುವ ಏಜೆನ್ಸಿಗಳು ಕೇಂದ್ರ ನಿಗದಿಪಡಿಸಿದ ಮಾನದಂಡಗಳ ಅನ್ವಯ ಎಫ್‌ಎಕ್ಯೂ ಗುಣಮಟ್ಟ ಆಧರಿಸಿ ರಾಗಿ ಖರೀದಿಸಬೇಕು. ಪ್ರತಿ ಖರೀದಿ ಕೇಂದ್ರದಲ್ಲೂ ಕೃಷಿ ಇಲಾಖೆಯಿಂದ ಗ್ರೇಡರ್‌ಗಳನ್ನು ನೇಮಿಸಬೇಕು. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗುಣಮಟ್ಟ ಪರೀಕ್ಷಕರೊಂದಿಗೆ ಗ್ರೇಡರ್‌ಗಳು ಜಂಟಿಯಾಗಿ ರಾಗಿ ಗುಣಮಟ್ಟ ಧೃಡೀಕರಿಸಬೇಕು.
ಖರೀದಿ ಕೇಂದ್ರಗಳಲ್ಲಿ ದಾಸ್ತಾನು ವ್ಯವಸ್ಥೆ ಹಾಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಫ್ರೂಟ್ಸ್ ದಾಖಲೆಗಳನ್ನು ಆಧರಿಸಿದ ನೋಂದಣಿಯಲ್ಲಿ ಗೊಂದಲಗಳಾಗಬಾರದು. ಪಹಣಿಯಲ್ಲಿ ಬೆಳೆ ವ್ಯತ್ಯಾಸ ಕಂಡುಬಂದರೆ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಖರೀದಿ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು. ರಾಗಿ ಖರೀದಿ ಕುರಿತು ರೈತರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಆಹಾರ ಇಲಾಖೆ ಜಂಟಿ ನಿರ್ದೇಶಕ ಕೆ.ಪಿ. ಮಧುಸೂದನ್ ಮಾತನಾಡಿ, 2022-23ನೇ ಸಾಲಿನಲ್ಲಿ ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಾಲ್‌ಗೆ 3578 ರೂ.ಗಳಂತೆ 21,715 ಮೆಟ್ರಿಕ್ ಟನ್, 2023-24ನೇ ಸಾಲಿನಲ್ಲಿ 3846 ರೂ.ಗಳಂತೆ 1832.60 ಮೆಟ್ರಿಕ್ ಟನ್ ರಾಗಿ ಖರೀದಿಸಲಾಗಿತ್ತು. ಈ ಬಾರಿ ರಾಗಿಗೆ 4290 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ.
ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಹಾಗೂ ಶ್ರೀರಾಂಪುರ ಎಪಿಎಂಸಿಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು. ಹಿರಿಯೂರು ಹಾಗೂ ಹೊಸದುರ್ಗದಲ್ಲಿ ಅಗತ್ಯವಿದ್ದರೆ ಹೆಚ್ಚುವರಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದರು.
ಎಡಿಸಿ ಬಿ.ಟಿ.ಕುಮಾರ ಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್, ಡಿವೈಎಸ್‌ಪಿ ಪಿ.ಕೆ. ದಿನಕರ್ ಮತ್ತಿತರ ಅಧಿಕಾರಿಗಳಿದ್ದರು.