ಜಿಲ್ಲೆ

ಬೆಂಬಲ ಬೆಲೆ ಯೋಜನೆಯಡಿ ರಾಗಿ,ಭತ್ತ, ಬಿಳಿ ಜೋಳ ಖರೀದಿ:

Hassan - Ramesh H R

ಹಾಸನ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಬಿಳಿ ಜೋಳ ಖರೀದಿಗೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2024-25ನೇ ಸಾಲಿನಲ್ಲಿ ಜಿಲ್ಲೆ ರೈತರಿಂದ ರಾಗಿ, ಭತ್ತ, ಬಿಳಿಜೋಳಗಳ ಖರೀದಿ ಪ್ರಕ್ರಿಯೆಯ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಕ್ವಿಂಟಾಲ್ ರಾಗಿ ರೂ. 4290, ಭತ್ತ 2300, ಬಿಳಿ ಜೋಳ 3321 ರೂಗಳ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಎಂದು ಹೇಳಿದರು.

ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಯ 38 ಹೋಬಳಿ ಕೇಂದ್ರಗಳಲ್ಲಿ ಡಿ.1ರಿಂದ ರೈತರ ನೋಂದಣಿ ಕಾರ್ಯ ಪ್ರಾರಂಭ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಖರೀದಿ ಕೇಂದ್ರಗಳಲ್ಲಿ 2025ರ ಜನವರಿ 1ರಿಂದ ಮಾರ್ಚ್ 31ರ ವರೆಗೆ ರಾಗಿ, ಭತ್ತ, ಬಿಳಿಜೋಳ ಖರೀದಿ ಮಾಡಲಾಗುವುದು ಎಂದು ತಿಳಿಸಿದರು.

ಖರೀದಿ ಕೇಂದ್ರಗಳಲ್ಲಿ ಸ್ವಚ್ಚವಾಗಿ ಕೆಲಸ ಮಾಡಲು ನಿಗಾವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಖರೀದಿ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ತರಬೇತಿ ನೀಡಬೇಕು. ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ನಿಗದಿತ ಮಾರ್ಗಸೂಚಿಯಂತೆ ಗುಣಮಟ್ಟವಿಲ್ಲದ ಉತ್ಪನ್ನಗಳನ್ನು ತಿರಸ್ಕಾರ ಮಾಡುವಂತೆ ಸೂಚಿಸಿದರು.

ಖರೀದಿ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಪ್ರೂಸ್ಟ್ ಐ.ಡಿ. ಕಡ್ಡಾಯವಾಗಿ ಇರಬೇಕು. ಒಂದು ಎಕರೆಗೆ ಎಷ್ಟು ಇಳುವರಿ ಬರುತ್ತದೆ ಎಂಬುದರ ಅನುಗುಣವಾಗಿ ರೈತರಿಂದ ಖರೀದಿಸಲು ಕ್ರಮವಹಿಸಬೇಕು. ಖರೀದಿ ಕೇಂದ್ರದಲ್ಲಿ ರೈತರಿಗೆ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ರೈತರಿಗೆ ಅನುಕೂಲವಾಗವಂತೆ ಎಲ್ಲಾರೂ ಸೇರಿ ಒಂದು ತಂಡವಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಸಾರ್ವಜನಿಕರಿಗೆ ಮೋಸವಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು ನಿಗಾವಹಿಸಿ ಎಲ್ಲಾ ರೀತಿಯ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವ ಮೂಲಕ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಬೇಕು ಎಂದರು.ು.

ಜಂಟಿ ಕೃಷಿ ನಿರ್ದೇಶಕ ರಮೇಶ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಅರುಣ್ ಕುಮಾರ್, ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರು ಹಾಗೂ ಮತ್ತಿತರರು ಹಾಜರಿದ್ದರು.