ಜಿಲ್ಲೆ

ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಬಂದ ಹತ್ತಿ ತಿರಸ್ಕಾರ

ಹುಬ್ಬಳ್ಳಿ: ಹತ್ತಿ ಬೆಳೆಗಾರರು ಒಂದೆಡೆ ದರ ಕುಸಿತದಿಂದ ಸಂಕಷ್ಟಕ್ಕೀಡಾಗಿದ್ದರೆ ಇನ್ನೊಂದೆಡೆ ಬೆಂಬಲ ಬೆಲೆ ಯೋಜನೆಯಡಿ ಭಾರತೀಯ ಹತ್ತಿ ನಿಗಮದವರು (ಸಿಸಿಐ) ಹತ್ತಾರು ನೆಪ ಹೇಳಿ ಸರಿಯಾಗಿ ಖರೀದಿ ಮಾಡದೆ ಮತ್ತಷ್ಟು ತೊಂದರೆಗೆ ಸಿಲುಕಿಸುತ್ತಿದ್ದಾರೆ.

ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿರುವ ರೈತರಿಗೆ ಸಿಸಿಐ ಅಧಿಕಾರಿಗಳು ಹತ್ತಿ ತರಲು ಹೇಳುತ್ತಿದ್ದಾರೆ. ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ ಖರೀದಿ ಕೇಂದ್ರಕ್ಕೆ ಹತ್ತಿ ತೆಗೆದುಕೊಂಡು ಬರುವ ರೈತರ ಬಹುತೇಕ ಹತ್ತಿಯನ್ನು ಅಧಿಕಾರಿಗಳು ರಿಜೆಕ್ಟ್ ಮಾಡುತ್ತಿದ್ದಾರೆ. ಗುಣಮಟ್ಟದ ನೆಪ ಹೇಳಿ ವಾಪಸ್ ಕಳಿಸಲಾಗುತ್ತಿದೆ. ಇದರಿಂದ ಬಂದ ದಾರಿಗೆ ಮತ್ತೊಮ್ಮೆ ಸುಂಕ ಕೊಟ್ಟು ವಾಪಸ್ ಹೋಗಬೇಕು ಇಲ್ಲವೇ ಅಲ್ಲೇ ಹತ್ತಿರದ ಜಿನ್​ಗಳಿಗೆ ಕೈಗೆ ಬಂದ ದರಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯತೆ ರೈತರದ್ದು.

ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ಉತ್ತಮ ದರ್ಜೆ ಹತ್ತಿಯನ್ನು 5355 ರೂ. ನಂತೆ ಖರೀದಿ ಮಾಡುತ್ತಿದ್ದಾರೆ. ಒಂದಿಷ್ಟು ಗುಣಮಟ್ಟ ಕಡಿಮೆ ಇದ್ದರೆ ದರ ಕಡಿಮೆ ಮಾಡಿ ತೆಗೆದುಕೊಳ್ಳುವುದಕ್ಕೂ ಅಧಿಕಾರಿಗಳಿಗೆ ಅವಕಾಶ ಇತ್ತು. ಆದರೆ, ಬಹುತೇಕ ರೈತರ ಹತ್ತಿ ರಿಜೆಕ್ಟ್ ಮಾಡಿ ಕಳಿಸಲಾಗುತ್ತಿದೆ ಎಂದು ಅನೇಕ ರೈತರು ದೂರಿದ್ದಾರೆ.

ಅದೇ ಹತ್ತಿಯನ್ನು ಹತ್ತಿರದ ಜಿನ್​ಗಳಿಗೆ 3000 ರೂ. ಬೆಲೆಗೆ ಮಾರಾಟ ಮಾಡಿ ರೈತರು ಕೈಸುಟ್ಟುಕೊಳ್ಳುವ ಪ್ರಸಂಗ ಬರುತ್ತಿದೆ.

ಅಧಿಕಾರಿಗಳ ಹೊಂದಾಣಿಕೆಯೇ?: ರೈತರಿಂದ ಖರೀದಿ ಮಾಡಿದ ಹತ್ತಿಯನ್ನೇ ಕೆಲ ವರ್ತಕರು ರೈತರ ಉತಾರ ಮೇಲೆ ಸಿಸಿಐಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಣ್ಣಿಗೇರಿ ಎಪಿಎಂಸಿ ಹಾಗೂ ಖರೀದಿ ಕೇಂದ್ರದ ಅಧಿಕಾರಿಗಳು ಹೆಸರು ನೋಂದಣಿ ಮಾಡಿಕೊಂಡ ರೈತರ ಮನೆಗೆ ಹೋಗಿ ಪರಿಶೀಲನೆ ಮಾಡುತ್ತಿದ್ದಾರೆ. ಇದರಿಂದ ಹತ್ತಿ ಬೆಳೆದಿರುವ ರೈತರು ಯಾರೆಂಬುದು ಖಚಿತವಾಗುತ್ತದೆ. ಜೊತೆಗೆ ಹತ್ತಿಯ ಗುಣಮಟ್ಟ ತಿಳಿಯುವುದರಿಂದ ಅಲ್ಲೇ ಅದನ್ನು ಖರೀದಿಸಬೇಕೋ ಅಥವಾ ತಿರಸ್ಕರಿಸಬೇಕೋ ಎಂಬುದು ನಿರ್ಧಾರವಾಗುತ್ತದೆ.

ಈ ವಿಧಾನ ಅಣ್ಣಿಗೇರಿಯಲ್ಲಿ ಮಾಡಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಏಕೆ ಇಲ್ಲ ಎಂಬುದು ರೈತರ ಪ್ರಶ್ನೆ. ಸಿಸಿಐ ಅಧಿಕಾರಿಗಳ ಅಂಧಾದುಂದಿಯಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹುಬ್ಬಳ್ಳಿ ಎಪಿಎಂಸಿಯಿಂದ ಬೇಕಿದ್ದರೆ ಸಿಬ್ಬಂದಿ ಪಡೆದು ರೈತರ ಮನೆಗೆ ಹೋಗಿ ಪರಿಶೀಲನೆ ಮಾಡಬೇಕು. ಅದರಿಂದ ರೈತ ಹತ್ತಿ ಬೆಳೆದಿದ್ದು, ಅದರ ಗುಣಮಟ್ಟ ಎರಡರ ಮಾಹಿತಿ ಸಿಗುತ್ತದೆ. ಆಗ ರಿಜೆಕ್ಟ್ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಖರೀದಿ ಕೇಂದ್ರಕ್ಕೆ ಬಂದ ಮೇಲೆ ತಿರಸ್ಕರಿಸಿದರೆ ಎರಡು ಪಟ್ಟು ನಷ್ಟ ರೈತರಿಗೆ ಆಗಲಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯೆಗೆ ಸಿಸಿಐ ಅಧಿಕಾರಿ ಗಣೇಶ ಚವ್ಹಾಣ ಅವರನ್ನು ಸಂರ್ಪಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಒಂದು ದಿನಕ್ಕೆ ಬರೀ 5 ರೈತರಿಂದ ಸಿಸಿಐನವರು ಹತ್ತಿ ಖರೀದಿಸುತ್ತಿದ್ದಾರೆ. 1400 ರೈತರು ನೋಂದಣಿ ಮಾಡಿಕೊಂಡಿದ್ದು, ಖರೀದಿ ಪ್ರಕ್ರಿಯೆ ಬಹಳ ವಿಳಂಬವಾಗುತ್ತಿದೆ. ನೋಂದಣಿ ಮಾಡಿಕೊಂಡ ರೈತರ ಮನೆ ಮನೆ ಭೇಟಿ ಮೂಲಕ ಈಗಿನ ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದು. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ವರ್ತಕರು-ಅಧಿಕಾರಿಗಳ ಮಧ್ಯೆ ಹೊಂದಾಣಿಕೆ ಏರ್ಪಟ್ಟಿದೆಯೇ ಎಂಬ ಅನುಮಾನ ಕಾಡುತ್ತಿದೆ. | ಶಿವಯೋಗಿ ಮಂಟೂರಶೆಟ್ರ, ರೈತ ಮುಖಂಡ