ಮೈಸೂರು: ಎಲ್ಲ ವರ್ಗದವರಿಗೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಬೆಂಗಳೂರು ವಿಶ್ವ ಮಟ್ಟದಲ್ಲಿ ಬೆಳೆಯಲು ನಾಡಪ್ರಭು ಕೆಂಪೇಗೌಡರು ಕಾರಣರಾಗಿದ್ದಾರೆ ಎಂದು ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಹೇಳಿದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದಿಂದ ನಗರದ ಅಗ್ರಹಾರ ವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ ಕೆಂಪೇಗೌಡರ 514ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಭಿವೃದ್ಧಿ ಕುರಿತು ಸಾಕಷ್ಟು ಮುಂದಾಲೋಚನೆ ಹೊಂದಿದ್ದ ಕೆಂಪೇಗೌಡರು ಎಲ್ಲ ವರ್ಗದ ಜನರಿಗೆ, ಅವರವರು ಮಾಡುವ ಕಸುಬುಗಳಿಗೆ ತಕ್ಕಂತೆ ಬಳೆಪೇಟೆ, ಕಾಟನ್‌ಪೇಟೆ, ಚಿಕ್ಕಪೇಟೆ, ದೊಡ್ಡಪೇಟೆ, ಅಕ್ಕಿಪೇಟೆ, ಮುಸ್ಲಿಮರಿಗೆ ಸುಲ್ತಾನ್‌ಪೇಟೆ ಸೇರಿದಂತೆ ಹಲವು ಸಮುದಾಯವರಿಗೆ 50ಕ್ಕೂ ಹೆಚ್ಚು ಪೇಟೆಗಳನ್ನು ನಿರ್ಮಿಸಿಕೊಟ್ಟರು ಎಂದು ಹೇಳಿದರು.
ಬೆಂಗಳೂರು ಇಂದು ದೇಶಕ್ಕೆ ಅಪಾರ ಕೊಡುಗೆ ನೀಡುತ್ತಿದ್ದು, ವಿಶ್ವ ಮಟ್ಟದಲ್ಲಿಯೂ ಗುರುತಿಸಿಕೊಂಡಿದೆ. ಈಗಿನ ರಾಜಕಾರಣಿಗಳು ಕೆಂಪೇಗೌಡರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಮಾನ್ಯ ಜನರ ಪರವಾಗಿ ಕೆಲಸ ಮಾಡಬೇಕು ಎಂದರು.
ಲೇಖಕ ಬನ್ನೂರು ಕೆ.ರಾಜು ಮಾತನಾಡಿ, ನಮ್ಮ ರಾಜ್ಯ, ದೇಶದ ಆಳ್ವಿಕೆಯನ್ನು ಹಲವಾರು ನಾಯಕರು, ಮಹಾರಾಜರು, ಸುಲ್ತಾನರು, ಮೊಘಲರು ನಡೆಸಿದ್ದಾರೆ. ಆದರೆ ಕೆಂಪೇಗೌಡರು ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವವುಳ್ಳ, ಜನಪರ ಕಾಳಜಿಯುಳ್ಳ ಮಹಾನ್ ವ್ಯಕ್ತಿಯಾಗಿ ಎಲ್ಲರನ್ನೂ ಸಮನಾಗಿ ಕಂಡಿದ್ದರು. ವ್ಯಾಪಾರದ ಜತೆಗೆ ಕೃಷಿಯನ್ನು ಪ್ರೋತ್ಸಾಹಿಸಿದ್ದ ಕೆಂಪೇಗೌಡರು, ಬೆಂಗಳೂರು ಸುತ್ತಮುತ್ತ ನೂರಾರು ಕೆರೆಗಳನ್ನು ನಿರ್ಮಿಸಿದ್ದರು ಎಂದು ತಿಳಿಸಿದರು.
ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ.ಗಂಗಾಧರ್ ಸಿಹಿ ವಿತರಣೆ ಮಾಡಿದರು. ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಪ್ರಮುಖರಾದ ಕೃಷ್ಣಯ್ಯ, ಪ್ರಭುಶಂಕರ್, ವಿಜಯೇಂದ್ರ, ಲತಾ ರಂಗನಾಥ್, ಶಾಂತರಾಜೇಅರಸ್, ನರಸಿಂಹಗೌಡ, ಹನುಮಂತಯ್ಯ, ಅಂಬಾ, ಪದ್ಮಾ, ಸುಬ್ಬೇಗೌಡ, ಶಿವಲಿಂಗಯ್ಯ, ದರ್ಶನ್‌ಗೌಡ, ಗಣೇಶ್‌ಪ್ರಸಾದ್, ಎಳನೀರು ರಾಮಣ್ಣ, ದಿಲೀಪ್, ಪ್ರಭಾಕರ, ವೆಂಕಟೇಶ್, ಮೂರ್ತಿ ಇತರರು ಇದ್ದರು.